ಕಾಸರಗೋಡು, ಮೇ 20 (Daijiworld News/MSP): ನಕಲಿ ಮತದಾನಕ್ಕೆ ಸಂಬಂಧಪಟ್ಟಂತೆ ಮರು ಚುನಾವಣೆ ನಡೆದ ಮತಗಟ್ಟೆಯ ಕಾಂಗ್ರೆಸ್ ಬೂತ್ ಏಜ೦ಟ್ ಹಾಗೂ ಏಪ್ರಿಲ್ 23 ರಂದು ನಕಲಿ ಮತದಾನ ಹಿನ್ನಲೆಯಲ್ಲಿ ತನ್ನ ಮತ ಚಲಾಯಿಸಲು ಸಾಧ್ಯವಾಗದೆ ನಕಲಿ ಮತದಾನದ ವಿರುದ್ಧ ಧ್ವನಿ ಎತ್ತಿದ್ದ ಶಾಲೆಟ್ ಎಂಬಾಕೆಯ ಮನೆ ಮೇಲೆ ಮೇ 20 ರ ಸೋಮವಾರ ಮುಂಜಾನೆ ಕಚ್ಚಾ ಬಾಂಬ್ ಎಸೆದ ಘಟನೆ ನಡೆದಿದೆ.
ಮನೆಗಳಿಗೆ ಹಾನಿ ಉಂಟಾಗಿದ್ದು , ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ಕಾಸರಗೋಡು ಲೋಕಸಭಾ ಕ್ಷೇತ್ರದ ಪಿಲಾತ್ತರ 19ನೇ ಮತಗಟ್ಟೆಯಲ್ಲಿ ಭಾನುವಾರ ನಡೆದ ಮರು ಮತದಾನದಲ್ಲಿ ಕಾಂಗ್ರೆಸ್ ನ ಬೂತ್ ಏಜಂಟ್ ಪದ್ಮನಾಭ ಎಂಬವರ ಮನೆ ಮೇಲೂ ಸೋಮವಾರ ಮುಂಜಾನೆ ಬಾಂಬ್ ಎಸೆಯಲಾಗಿದ್ದು , ಮನೆಗೆ ಹಾನಿ ಉಂಟಾಗಿದೆ.
ಏಪ್ರಿಲ್ 23 ರಂದು ನಡೆದ ಚುನಾವಣಾ ದಿನ ಪಿಲಾತ್ತರ 19 ನೇ ಮತಗಟ್ಟೆಗೆ ಬಂದಿದ್ದ ಶಾಲೆಟ್ ಎಂಬಾಕೆಯ ಮತವನ್ನು ಬೇರೆ ಯಾರೂ ಚಾಲಾಯಿಸಿದ್ದು , ಇದರಿಂದ ಶಾಲೆಟ್ ಗೆ ಮತ ಚಲಾಯಿಸಲು ಸಾಧ್ಯವಾಗಿರಲಿಲ್ಲ . ಈಕೆಯ ಮತವನ್ನು ನಕಲಿಯಾಗಿ ಬೇರೆ ಯಾರೂ ಚಲಾಯಿಸಿದ್ದರು .
ಶಾಲೆಟ್ ಅವರಿಗೆ ನಿನ್ನೆ ಮತ ಚಲಾಯಿಸುವ ಹಕ್ಕು ಲಭಿಸಿತ್ತು. ಮತ ಚಲಾಯಿಸಲು ನಿನ್ನೆ ಸರದಿ ಸಾಲಲ್ಲಿ ನಿಂತಿದ್ದಾಗ ಈಕೆಯನ್ನು ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾ ನ್ ಭೇಟಿಯಾಗಿದ್ದು , ಇದು ಸಿಪಿಎಂ ನ್ನು ಕೆರಳಿಸಿತ್ತು . ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತಯಾಚನೆ ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು
ನಕಲಿ ಮತದಾನದ ಬಗ್ಗೆ ಶಾಲೆಟ್ ಧ್ವನಿ ಎತ್ತಿದ್ದರು:
ಪಿಲಾತ್ತರ 19 ನೇ ಮತಗಟ್ಟೆಯಲ್ಲಿ ನಕಲಿ ಮತದಾನದ ಬಗ್ಗೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಸಂದರ್ಭದಲ್ಲಿ ಸಿಪಿಎಂ ಗ್ರಾಮ ಪಂಚಾಯತ್ ಸದಸ್ಯೆ ಸೇರಿದಂತೆ ಹಲವು ಸಿಪಿಎಂ ಕಾರ್ಯಕರ್ತರು ನಕಲಿ ಮತದಾನ ನಡೆಸಿರುವುದು ಪತ್ತೆಯಾಗಿತ್ತು . ಮಾತ್ರವಲ್ಲದೆ ಶಾಲೆಟ್ ಮತ ಚಲಾಯಿಸಲು ಸಾಧ್ಯವಾಗದೆ ಮತಗಟ್ಟೆಯಲ್ಲಿ ಗಂಟೆಗಳ ಕಾಲ ಕಾದು ಮತ ಚಲಾಯಿಸಲು ಸಾಧ್ಯವಾಗದೆ ತೆರಳುತ್ತಿರುವುದು ಕಂಡುಬಂದಿತ್ತು . ಇದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿತ್ತು .
ಈ ಎರಡೂ ಕೃತ್ಯದ ಹಿಂದೆ ಸಿಪಿಎಂ ಕೈವಾಡ ಎಂದು ಕಾಂಗ್ರೆಸ್ ಆರೋಪಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ ನೀಡಿತು.