ಬಳ್ಳಾರಿ, ನ 25: ಜಿಲ್ಲೆಯ ಮರಿಯಮ್ಮನ ಹಳ್ಳಿ ಬಳಿ ತುಂಬು ಗರ್ಭಿಣಿ ಹೆಂಗಸೊಬ್ಬರು ಆಂಬುಲೆನ್ಸ್ ನಲ್ಲಿಯೇ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಹೊಸಪೇಟೆ ತಾಲೂಕಿನ ಅಯ್ಯನಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಿ ಅವರು ತುಂಬು ಗರ್ಭಿಣಿಯಾಗಿದ್ದು, ಮುಂಜಾನೆ ವೇಳೆ ಹೆರಿಗೆ ನೋವು ಕಾಣಿಸಿತ್ತು. ಹೀಗಾಗಿ ಲಕ್ಷ್ಮಿ ಅವರ ಪತಿ ಆಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.
ಆಸ್ಪತ್ರೆ ತಲುಪುವ ಮೊದಲೇ ಲಕ್ಷ್ಮಿ ಅವರಿಗೆ ಹೆರಿಗೆ ನೊವು ಜಾಸ್ತಿಯಾಗಿ, ಮರಿಯಮ್ಮನಹಳ್ಳಿ ಬರುತ್ತಿದ್ದಾಗ ಆಂಬುಲೆನ್ಸ್ ನಲ್ಲಿಯೇ ಹೆರಿಗೆಯಾಗಿದೆ. ಆಂಬುಲೆನ್ಸ್ ಸಿಬ್ಬಂದಿಗಳಾದ ಅನಿಲ್ ಮತ್ತು ಚಾಲಕ ಸುರೇಶ್ ಸುರಕ್ಷಿತವಾಗಿ ಆಂಬುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳನ್ನು ಅಪಾಯದಿಂದ ಪಾರು ಮಾಡಿದ್ದಾರೆ.
ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿರುವ ಲಕ್ಷ್ಮಿ ಅವರನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.