ಕಾಸರಗೋಡು, ಮೇ 20 (Daijiworld News/SM): ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾ ತಂಡವಾದ ಕ್ರೈಂ ಬ್ರಾಂಚ್ ನ್ಯಾಯಾಯಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಕೊಲೆಗೆ ರಾಜಕೀಯ ದ್ವೇಷ ಕಾರಣವಲ್ಲ ವೈಯುಕ್ತಿಕ ಪೂರ್ವ ದ್ವೇಷ ಕಾರಣ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಸಿಪಿಎಂ ಪೆರಿಯ ವಲಯ ಸಮಿತಿ ಸದಸ್ಯ ಪೀತಾಂಬರನ್, ಈತನ ಸ್ನೇಹಿತ ಸಜಿ ಜಿ. ಜೋರ್ಜ್ ಪ್ರಮುಖ ಆರೋಪಿಗಳಾಗಿದ್ದು, ಪೀತಾಂಬರನ್ ಗೆ ಕೃಪೇಶ್ ಮತ್ತು ಶರತ್ ಲಾಲ್ ಮೇಲಿದ್ದ ದ್ವೇಷವೇ ಕೊಲೆಗೆ ಕಾರಣ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಹೊಸದುರ್ಗ ಜ್ಯುಡಿಶಿಯಲ್ ಮೇಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, 14 ಆರೋಪಿಗಳನ್ನು ಗುರುತಿಸಲಾಗಿದೆ. ಪೀತಾಂಬರನ್, ಸಜಿ ಸೇರಿದಂತೆ ಎಂಟು ಮಂದಿ ಸೇರಿ ಕೃತ್ಯ ನಡೆಸಿದ್ದು, ಉಳಿದವರು ಸಂಚು ರೂಪಿಸಿದವರು ಮಾತ್ರವಲ್ಲ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದವರಾಗಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.
229 ಸಾಕ್ಷಿಗಳು, 105 ವಸ್ತುಗಳು, 50 ದಾಖಲೆಗಳನ್ನು ಒಳಗೊಂಡ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಕೃತ್ಯ ನೆಡೆದು ೯೨ನೇ ದಿನದಂದು ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಆರೋಪಿಗಳಾದ ಪೀತಾಂಬರನ್ ಸೇರಿದಂತೆ ಎಂಟು ಮಂದಿ ನ್ಯಾಯಾಂಗ ಬಂಧನದಲ್ಲಿದ್ದು, ಸಿಪಿಎಂ ಉದುಮ ವಲಯ ಕಾರ್ಯದರ್ಶಿ ಕೆ.ಮಣಿಕಂಠನ್, ಉದುಮ ಸ್ಥಳೀಯ ಕಾರ್ಯದರ್ಶಿ ಎನ್. ಬಾಲಕೃಷ್ಣನ್ ಸೇರಿದಂತೆ ಮೂವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.