ಮಂಗಳೂರು, ಮೇ.20(Daijiworld News/SS): ದೋಸ್ತಿ ಸರಕಾರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದು, ಸಮಸ್ಯೆಗೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದು ವರ್ಷವಾಗುತ್ತಿದೆ. ಅಂದು ಅಧಿಕಾರ ಸ್ವೀಕರಿಸುವ ಸಂದರ್ಭ ನಾನು ಸಾಂದರ್ಭಿಕ ಶಿಶು ಎಂಬುದನ್ನು ಸಿಎಂ ಕುಮಾರಸ್ವಾಮಿ ಹೇಳಿದ್ದು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸದೆ ಅವರು ಹೇಳಿದ್ದನ್ನು ಒಂದು ವರ್ಷದಲ್ಲಿ ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಹುಡುಕುವ ಸ್ಥಿತಿ ಬಂದಿದೆ. ವಿದ್ಯುತ್ ಕಣ್ಣುಮುಚ್ಚಾಲೆ ಇರುವಾಗ ಕುಡಿಯುವ ನೀರಿನ ಬಗ್ಗೆ ತುರ್ತು ಸಭೆ ನಡೆಸಬೇಕಾಗಿತ್ತು. ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಬರ ನಿರ್ವಹಣೆ ಸಭೆ ನಡೆಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕಿಡಿಕಾರಿದರು.
ಒಂದೆಡೆ ರಾಜ್ಯದ ಮುಖ್ಯಮಂತ್ರಿ ರೆಸಾರ್ಟ್ನಲ್ಲಿ ಮೋಜು ಮಸ್ತಿಯಲ್ಲಿ ನಿರತರಾಗಿದ್ದರೆ, ಸಚಿವರು ವಿದೇಶ ಪ್ರವಾಸದಲ್ಲಿ ನಿರತರಾಗಿ ಕುಡಿಯುವ ನೀರಿನ ಸಮಸ್ಯೆ, ಬರ, ಮೇವಿನ ಕೊರತೆ ಮೊದಲಾದ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಳೆದ ವರ್ಷ ಕೊಳೆರೋಗದ ಸಮಸ್ಯೆ ಹೆಚ್ಚಾಗಿತ್ತು. ಈ ವರ್ಷ ಬರದಿಂದ ಗ್ರಾಮೀಣ ಭಾಗದ ಕೃಷಿಕರು ಅಡಕೆ ತೋಟವನ್ನು ಕಳೆದುಕೊಂಡಿದ್ದಾರೆ. ಅನೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಪಶ್ಚಿಮ ವಾಹಿನಿ ಯೋಜನೆ ಘೋಷಿಸಿ ವರ್ಷಗಳಾದರೂ ಒಂದೇ ಒಂದು ಯೋಜನೆ ಈ ಯೋಜನೆಯಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಕೇವಲ ಘೋಷಣೆಗಷ್ಟೇ ಈ ಸರಕಾರ ಸೀಮಿತವಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಅನೇಕ ನದಿಗಳಲ್ಲಿ ಮರಳು ಪ್ರಾಕೃತಿಕವಾಗಿ ದೊರೆಯುತ್ತದೆ. ಆದರೆ ಜಿಲ್ಲಾಧಿಕಾರಿ ಹಾಗೂ ಸರಕಾರ ಇದಕ್ಕೆ ಸೂಕ್ತ ಅವಕಾಶ ಮಾಡಿಕೊಡದ ಕಾರಣ ನದಿಗಳಲ್ಲಿ ಮರಳು ತುಂಬಿಕೊಂಡಿದೆ. ಅದನ್ನು ಹಾಗೆಯೇ ಬಿಟ್ಟರೆ ಅದು ಹೂಳು ಆಗುತ್ತದೆ. ಇದರಿಂದ ಮುಂದೆ ನೆರೆ ಬಂದರೆ ನೀರು ಉಕ್ಕಿ ಹರಿದು ಪ್ರಾಕೃತಿಕ ವಿಕೋಪಕ್ಕೆ ದಾರಿ ಮಾಡಿಕೊಡಲಿದೆ ಎಂದು ತಿಳಿಸಿದರು.
ಕೆಲವು ಮಂದಿಗೆ ಮಾತ್ರ ನಾನ್ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳು ಪರವಾನಗಿ ಕೊಡಲಾಗಿದೆ. ಕೇವಲ ಒಂದು ಸಾವಿರ ಮೆಟ್ರಿಕ್ ಟನ್ ಮರಳು ತೆಗೆಯಲು ಮಾತ್ರ ಅನುಮತಿ ನೀಡಲಾಗಿದೆ. ಮುಂದೆ ನೆರೆ ಬಂದು ಪರಿಸ್ಥಿತಿ ಬಿಗಡಾಯಿಸಿದರೆ ಅದಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆಗಾರರು ಎಂದು ದೂರಿದರು.