ಮಂಗಳೂರು, ನ 25: ರೌಡಿ ನಿಗ್ರಹ ದಳದ ಪೊಲೀಸರು ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಮೆಡಿಕಲ್ ಸ್ಟೋರ್ಸ್ನಲ್ಲಿ ಮಾದಕ ಔಷಧ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಮೆಡಿಕಲ್ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರಿನ ಯೆಯ್ಯಾಡಿ ಜಂಕ್ಷನ್ನಲ್ಲಿರುವ ಪ್ರಜ್ವಲ್ ಮೆಡಿಕಲ್ಸ್ನಲ್ಲಿ ಕಾನೂನು ಬಾಹಿರವಾಗಿ , ವೈದ್ಯರ ಸಲಹಾ ಚೀಟಿ ಇಲ್ಲದೇ ನ್ಯೂಟ್ರೋಸನ್ ಎನ್ನುವ ಮಾದಕ ಔಷದವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಮಂಗಳೂರು ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮಾದಕ ಔಷಧವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಮೆಡಿಕಲ್ ಸ್ಟೋರ್ ಮಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.