ಉಡುಪಿ, ಮೇ 20 (Daijiworld News/SM): ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಕ್ಕೆ ಸಂಬಂಧಿಸಿದಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಮೇ 23 ರಂದು ಬ್ರಹ್ಮಗಿರಿಯ ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಅಂದು ಬೆಳಗ್ಗೆ 5 ಗಂಟೆಯಿಂದ ಮತ ಎಣಿಕೆ ಮುಗಿಯುವ ತನಕ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಬದಲಾವಣೆಗೊಳಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.
ಈ ಆದೇಶದನ್ವಯ ಬ್ರಹ್ಮಗಿರಿ ಜಂಕ್ಷನ್ನಿಂದ ಅಜ್ಜರಕಾಡು ಎಲ್.ಐ.ಸಿ ಕಚೇರಿವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ನಿಷೇಧಿಸಿ, ಮತ ಎಣಿಕೆ ಸಮಯದಲ್ಲಿ ಆಗಮಿಸುವ ಸಾರ್ವಜನಿಕರ ದ್ವಿಚಕ್ರ ಮತ್ತು ಲಘು ವಾಹನಗಳಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಈ ರಸ್ತೆಯಲ್ಲಿ ಕಲ್ಪಿಸಲಾಗಿದೆ. ಅಜ್ಜರಕಾಡು ಟೌನ್ಹಾಲ್ನಿಂದ ಬ್ರಹ್ಮಗಿರಿ ಜಂಕ್ಷನ್ವರೆಗೆ ಇರುವ ಏಕಮುಖ ಸಂಚಾರದ ಬದಲಿಗೆ ದ್ವಿಮುಖ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಅಜ್ಜರಕಾಡು ಲಾಲ್ ಬಹದ್ದೂರ್ ಶಾಸ್ತ್ರಿ ರಸ್ತೆಯಿಂದ ಎಲ್.ಐ.ಸಿ ಕ್ರಾಸ್ವರೆಗೆ ಸಾರ್ವಜನಿಕರನ್ನು ಸೇರಿದಂತೆ ಎಲ್ಲಾ ವಾಹನಗಳ ಓಡಾಟವನ್ನು ನಿಷೇಧಿಸಿ, ಈ ಮಾರ್ಗವಾಗಿ ಬರುವ ಮತ ಎಣಿಕೆ ಸಿಬ್ಬಂದಿ, ಏಜೆಂಟ್ ಅಭ್ಯರ್ಥಿಗಳಿಗೆ, ಮಾಧ್ಯಮದವರಿಗೆ, ಲಘು ಮೋಟಾರ್ ವಾಹನಗಳಿಗೆ ಸುದರ್ಶನ್ ಅಪಾರ್ಟ್ಮೆಂಟ್ ಬಳಿಯ ಖಾಲಿ ಜಾಗದಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸೈಂಟ್ ಸಿಸಿಲಿಯ ಕಾನ್ವೆಂಟ್ ರಸ್ತೆ ಬ್ರಹ್ಮಗಿರಿ ಮಾರ್ಗವಾಗಿ ಜಗನಾಥ್ ನಾಯಕ್ ಕ್ರಾಸ್ ರಸ್ತೆವರೆಗೆ ಹೋಗುವ ಮತ್ತು ಬರುವ ಎಲ್ಲಾ ವಾಹನಗಳ ಓಡಾಟವನ್ನು ಸಂಪೂರ್ಣ ನಿಷೇಧಿಸಿ, ಅಲ್ಲಿನ ನಿವಾಸಿಗಳಿಗೆ ಮಾತ್ರ ಪಾಸ್ ನೀಡಲಾಗಿದ್ದು, ಅವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.