2008ರ ನವೆಂಬರ್ 26ರಂದು 10 ಜನ ಪಾಕಿಸ್ತಾನದ ಲಷ್ಕರ್ ಉಗ್ರರು ಭಾರತದೊಳಗೆ ಸಮುದ್ರದ ಮೂಲಕ ನುಸುಳಿ, ಮುಂಬೈನ 7 ಕಡೆ ದಾಳಿ ನಡೆಸಿದ್ದರು. ಪ್ರಸಿದ್ಧ ತಾಜ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಪೋಲ್ಡ್ ಕೆಫೆ, ಕಾಮಾ ಆಸ್ಪತ್ರೆ, ಸೇಂಟ್ ಕ್ಸೇವಿಯರ್ ಕಾಲೇಜ್ ಸೇರಿದಂತೆ 7 ಕಡೆಗಳಲ್ಲಿ ಉಗ್ರರು ದಾಳಿ ಮಾಡಿದ್ದರು. ಈ ದಾಳಿಗೆ ಹಲವು ಮಂದಿ ಪ್ರಾಣ ತೆತ್ತಿದ್ದರು. ಇಂದು ಉಗ್ರರ ಈ ಕೃತ್ಯಕ್ಕೆ 9 ವರ್ಷ ತುಂಬಿದೆ. ಮುಂಬೈ ಸೇರಿದಂತೆ ದೇಶದ ನಾನಾ ಕಡೆ ಈ ಕರಾಳ ದಿನದ ವರ್ಷಾಚರಣೆ ನಡೆಸಲಾಗುತ್ತಿದೆ. ಮಡಿದ ಪೊಲೀಸ್ ಸಿಬ್ಬಂದಿ, ಹುತಾತ್ಮ ಕಮಾಂಡೋಗಳನ್ನು ನೆನೆದು, ನಮಿಸಲಾಗುತ್ತಿದೆ. ಮುಂಬೈನ ಮರೀನ್ ಲೈನ್ಸ್ನಲ್ಲಿರುವ ಸ್ಮಾರಕದ ಬಳಿ ಹುತಾತ್ಮರಿಗೆ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್, ಸಿಎಂ ದೇವೇಂದ್ರ ಫಡ್ನಾವೀಸ್ ಮತ್ತು ಸಚಿವರು, ಹಿರಿಯ ಅಧಿಕಾರಿಗಳು, ಪೊಲೀಸರು ಅಧಿಕಾರಿಗಳು ಸೇರಿದಂತೆ ಹಲವರು ಹುತಾತ್ಮರ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.