ಕುಂದಾಪುರ, ಮೇ 21 (Daijiworld News/MSP): ಬರ್ತ್ಡೇ ಪಾರ್ಟಿಯೊಂದರ ಕ್ಯಾಟರಿಂಗ್ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವ್ಯಕ್ತಿಗೆ ಇಬ್ಬರು ದುಷ್ಕರ್ಮಿಗಳ ತಂಡ ಮಾರಣಾಂತಿಕ ತಲವಾರು ದಾಳಿ ನಡೆಸಿ ಹಣ ದೋಚಿ ಪರಾರಿಯಾದ ಘಟನೆ ಸೋಮವಾರ ತಡ ರಾತ್ರಿ 11 ಗಂಟೆ ಸುಮಾರಿಗೆ ನೇರಳಕಟ್ಟೆಯ ಭಟ್ರಹಾಡಿ ಎಂಬಲ್ಲಿ ನಡೆದಿದೆ. ಗಂಭೀರ ಹಲ್ಲೆಗೊಳಗಾದ ವ್ಯಕ್ತಿಯನ್ನು ನೇರಳಕಟ್ಟೆ ಭಟ್ರಹಾಡಿ ನಿವಾಸಿ ಅಕ್ಷತ್ ಶೆಟ್ಟಿ (24) ಎಮದು ಗುರುತಿಸಲಾಗಿದ್ದು, ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳಿಬ್ಬರನ್ನು ಸಂತೋಷ್ ಶೆಟ್ಟಿ ಅಸೋಡು ಹಾಗೂ ಪ್ರಸಾದ್ ಶೆಟ್ಟಿ ಚೋರುಮಕ್ಕಿ ಎಂದು ಗುರುತಿಸಲಾಗಿದೆ.
ಹಲ್ಲೆಗೊಳಗಾದ ಅಕ್ಷತ್ ಶೆಟ್ಟಿ ಕ್ಯಾಟಂರಿಂಗ್ ಕೆಲಸ ಮಾಡಿಕೊಂಡಿದ್ದು, ಸೋಮವಾರ ಸಂಜೆ ಬರ್ತ್ಡೇ ಕಾರ್ಯಕ್ರಮಕ್ಕೆ ಹೋಗಿದ್ದರು. ರಾತ್ರಿ ಸುಮಾರು 11 ಗಂಟೆಗೆ ಕ್ಯಾಟರಿಂಗ್ ಮುಗಿಸಿ ತನ್ನ ಬೈಕಿನಲ್ಲಿ ಮನೆಗೆ ಬರುತ್ತಿದ್ದಾಗ ಮನೆ ಸಮೀಪದ ಗೇಟ್ ತೆರೆಯಲೆಂದು ಬೈಕ್ ನಿಲ್ಲಿದ ವೇಳೆ ಬೈಕಿನಲ್ಲಿ ಬಂದು ಅಲ್ಲಿಯೇ ಕಾಯುತ್ತಾ ಕುಳಿತಿದ್ದ ಆರೋಪಿಗಳಾದ ಸಂತೋಷ್ ಶೆಟ್ಟಿ ಅಸೋಡು ಹಾಗೂ ಪ್ರಸಾದ್ ಶೆಟ್ಟಿ ಚೋರುಮಕ್ಕಿ ತಲವಾರಿನಿಂದ ಕಾಲಿಗೆ, ತಲೆಗೆ ಮತ್ತು ಭಜಕ್ಕೆ ಕಡಿದಿದ್ದಾರೆ. ದಾಳಿಯ ಪರಿಣಾಮ ಗಂಭೀರ ಗಾಯಗೊಂಡ ಅಕ್ಷತ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಬೊಬ್ಬೆ ಕೇಳಿದ ನೆರೆಮನೆಯವರು ಟಾರ್ಚ್ ಹಾಕುತ್ತಿದ್ದಾಗ ದುಷ್ಕರ್ಮಿಗಳು ಅಕ್ಷತ್ ಬಳಿಯಿದ್ದ ಕ್ಯಾಟರಿಂಗ್ನ ಹಣ ನಲ್ವತ್ತು ಸಾವಿರ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಅಕ್ಷತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿಂದೆಯೂ ಏಳೆಂಟು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಅಕ್ಷತ್ ಮೇಲೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ ಎಂದು ಆರೋಪಿಸಿ ಎರಡು ಬಾರಿ ಹಲ್ಲೆ ನಡೆಸಿದ್ದರು. ಇದೀಗ ಮೂರನೆ ಬಾರಿ ತಲವಾರು ದಾಳಿ ನಡೆಸಿದ್ದಾರೆ ಎಂದು ಅಕ್ಷತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. ಗಂಭೀರ ಗಾಯಗೊಂಡ ಅಕ್ಷತ್ನನ್ನು ಸ್ಥಳೀಯ ನೆರೆಕರೆಯವರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಕಂಡ್ಲೂರಿನಲ್ಲಿ ಪ್ರಕರಣ ದಾಖಲಾಗಿದೆ.