ಮಂಗಳೂರು, ಮೇ21(Daijiworld News/SS): ಮತ ಎಣಿಕೆ ದಿನಾಂಕ ಹತ್ತಿರವಾಗುತ್ತಿದ್ದು, ಸುರತ್ಕಲ್ನ ಎನ್ಐಟಿಕೆ ಮತ ಎಣಿಕೆ ಕೇಂದ್ರಕ್ಕೆ ಭದ್ರತೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲಾ ಮತ ಎಣಿಕಾ ಕಾರ್ಯವು ಮಂಗಳೂರಿನ ಎನ್ಐಟಿಕೆ ಕಾಲೇಜಿನಲ್ಲಿ ನಡೆಯಲಿದೆ. ಮೇ.23 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಅಂದು ಮುಂಜಾನೆ 7 ಗಂಟೆಗೆ ಭದ್ರತಾ ಕೊಠಡಿ ತೆರೆಯುವ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ.
ಸುರತ್ಕಲ್ ಎನ್.ಐ.ಟಿ.ಕೆ ಶಿಕ್ಷಣ ಸಂಸ್ಥೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು ಭದ್ರತೆ ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳ ಮತ ಯಂತ್ರಗಳ ಮತ ಎಣಿಕೆ ನಡೆಯಲಿದೆ. 8 ಕ್ಷೇತ್ರಕ್ಕೆ 14 ಟೇಬಲ್ ಮೂಲಕ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮೇ.22ರ ಸಂಜೆ 6ರಿಂದ 23ರ ಮಧ್ಯರಾತ್ರಿಯವರೆಗೂ ಸೆಕ್ಷನ್ ಜಾರಿಯಲ್ಲಿರಲಿದ್ದು, ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಸಂಭ್ರಮ ಆಚರಣೆ ನಡೆಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಲೋಕಸಭಾ ಮತ ಎಣಿಕೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಮತ್ತು ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಅವರಿಗೂ ಬೆಂಗಳೂರಿನಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ನಗರದ ಹೊರ ವಲಯದಲ್ಲಿರುವ ಸುರತ್ಕಲ್ ಎನ್ಐಟಿಕೆ ಆವರಣದಲ್ಲಿ ಇದೇ ಮೊದಲ ಬಾರಿಗೆ ದ.ಕ. ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಈ ಹಿಂದೆ 2009ರ ಮತ ಎಣಿಕೆ ನಗರದ ಕೆನರಾ ಕಾಲೇಜು ಆವರಣದಲ್ಲಿ ನಡೆದಿತ್ತು.