ಪುತ್ತೂರು, ಮೇ21(Daijiworld News/SS): ಬಾವಿ ಸ್ವಚ್ಛಗೊಳಿಸಲು 65 ಅಡಿಗೂ ಅಧಿಕ ಆಳದ ಇಕ್ಕಟ್ಟಾದ ಬಾವಿಗೆ ಇಳಿದ ಕಾರಣ ತಂದೆ-ಮಗ ಬಾವಿಯೊಳಗೆ ಆಮ್ಲಜನಕದ ಸಮಸ್ಯೆಗೆ ಒಳಗಾಗಿದ್ದು, ಕೊನೆಗೆ ಅಗ್ನಿಶಾಮಕ ದಳದವರು ಬಂದು ಇಬ್ಬರನ್ನೂ ರಕ್ಚಿಸಿದ್ದಾರೆ.
ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಬಾಣದಪದವು ಎಂಬಲ್ಲಿನ ಮೂಲೆಗದ್ದೆ ಎಂಬಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರಾದ ಬಾಬು ( 50) ಮತ್ತು ಅವರ ಮಗ ಶ್ರೀನಿವಾಸ (26) ಎಂಬವರು ಬಾವಿಯೊಳಗೆ ಉಸಿರಾಟದ ಸಮಸ್ಯೆಗೆ ಸಿಲುಕಿದವರು.
ಬಾವಿಯ ಕೆಸರು ಮಣ್ಣು ತೆಗೆದು ದುರಸ್ತಿ ಮಾಡುವ ಕೆಲಸಕ್ಕೆಂದು ಅಳವಾದ ಬಾವಿಗೆ ಇಳಿದ ಅಪ್ಪ, ಮಗ ಇಬ್ಬರು ಬಾವಿಯೊಳಗೆ ಆಮ್ಲಜನಕದ ಸಮಸ್ಯೆಗೆ ಒಳಗಾಗಿದ್ದಾರೆ. ಬಾಬು ಎಂಬವರು ಬಾವಿಗೆ ಇಳಿದು ಕೆಸರು ಶುಚಿಗೊಳಿಸುವ ಸಂದರ್ಭ 65 ಅಡಿ ಆಳದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕಂಡಿತು. ವಿಷಯ ಅರ್ಥ ಮಾಡಿಕೊಂಡ ಮಗ ಶ್ರೀನಿವಾಸ್ ಕೂಡ ಬಾವಿಗೆ ಇಳಿದಿದ್ದರು.
ಈ ವೇಳೆ ಅವರಿಗೂ ಅದೇ ಸಮಸ್ಯೆ ಕಾಣಿಸಿಕೊಂಡಾಗ ಬಾವಿಯ ಮೇಲಿದ್ದವರು ತಕ್ಣಣ ಅಗ್ನಿಶಾಮಕದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಲ್ಲಿಗೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಲೀಲಾಧರ್ ಬಾವಿಗೆ ಇಳಿದು ಧೈರ್ಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಮೇಲೆತ್ತಿ ರಕ್ಷಿಸಿದ್ದಾರೆ.