ಮಂಗಳೂರು, ಮೇ 22 (Daijiworld News/MSP): ಕರಾವಳಿಯಲ್ಲಿ ನಡೆದ ಆ ಘೋರ ದುರಂತ ಜನ ಇನ್ನು ಮರೆತಿಲ್ಲ. ಅದು 2010ನೇ ಇಸವಿ ಮೇ 22 ಮುಂಜಾನೆ 6:14 ರ ಸಮಯ. ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಂಜಾರು ಬಳಿ ಭೀಕರ ಅಪಘಾತಗೀಡಾಗಿ 8 ಮಂದಿ ಸಿಬ್ಬಂದಿಗಳ ಸಹಿತ 159 ಜೀವಗಳನ್ನು ಬಲಿತೆಗೆದುಕೊಂಡಿತ್ತು. ದುಬೈಯಿಂದ ಕನಸುಗಳನ್ನು ಹೊತ್ತುಕೊಂಡು ತವರಿಗೆ ಮರಳುತ್ತಿದ್ದ ಕನಸುಗಳು ಅಲ್ಲೇ ಜೀವಂತ ಸಮಾಧಿಯಾಗಿತ್ತು.
ಈ ಕಹಿ ನೆನಪಿನ ವಿಮಾನ ದುರಂತ ನಡೆದು ಇಂದಿಗೆ ಬರೋಬ್ಬರಿ 9 ವರ್ಷವಾಗಿದೆ. ಆದ್ರೂ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡವರ ಕುಟುಂಬ ಇಂದಿಗೂ ಕೂಡ ಕಣ್ಣೀರಲ್ಲಿ ಕೈತೊಳೆಯುತ್ತಲೇ ಇದೆ.
ಇನ್ನು ಈ ದುರಂತದಲ್ಲಿ ಮಡಿದವರ ಸ್ಮಾರಕಾರ್ಥ ಮಂಗಳೂರಿನ ಕೂಳೂರು ಸೇತುವೆ ಪಕ್ಕದ ಉದ್ಯಾನವನದಲ್ಲಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತ, ನವಮಂಗಳೂರು ಬಂದರು ಮಂಡಳಿ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ, ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೆಂಜಾರಿನಲ್ಲಿ 2010 ರ ಮೇ 22 ರ ಬೆಳ್ಳಂಬೆಳಗ್ಗೆ ಆರು ಗಂಟೆ ವೇಳೆಗೆ ವಿಮಾನ ದುರಂತ ಸಂಭವಿಸಿತ್ತು. ವಿಮಾನ ಮಹಾದುರಂತದಲ್ಲಿ ಸಾವನ್ನಪ್ಪಿದ 158 ಮಂದಿಯಲ್ಲಿ 12 ಮಂದಿಯ ಗುರುತನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಮೃತದೇಹಗಳನ್ನು ತಣ್ಣೀರು ಬಾವಿ ಸಮುದ್ರ ಕಿನಾರೆಯ ಸಮೀಪ ಜಿಲ್ಲಾಡಳಿತದ ವತಿಯಿಂದ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿತ್ತು. ದೇಶ ಕಂಡ ಅತೀ ದೊಡ್ಡ ದುರಂತದಲ್ಲಿ ಮಂಗಳೂರಿನಲ್ಲಿ ನಡೆದ ವಿಮಾನ ದುರಂತವೂ ಒಂದಾಗಿದೆ.
ಈ ಸಂದರ್ಭ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ| ಆರ್. ಸೆಲ್ವಮಣಿ. ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು, ಏರ್ ಇಂಡಿಯಾ ಸಂಸ್ಥೆಯ ಅಧಿಕಾರಿಗಳು ಹಾಗೂ ಮಡಿದವರ ಕುಟುಂಬಸ್ಥರು ಸೇರಿ ಶ್ರದ್ಧಾಂಜಲಿ ಸಲ್ಲಿಸಿದರು.