ಉಳ್ಳಾಲ, ಮೇ 22 (Daijiworld News/MSP): ಮೇ 20 ರ ಭಾನುವಾರ ಇಲ್ಲಿನ ಅಶ್ರಯ ಕಾಲೋನಿಯಲ್ಲಿರುವ ಕುಂಪಲ ಕೊಠಡಿಯೊಂದರಲ್ಲಿ ಗೋಡ್ಸೆಯ ಜನ್ಮದಿನಾಚರಣೆಯನ್ನು ಆಚರಣೆ ಮಾಡಿದ ಹಿನ್ನಲೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ದ ಮುಖಂಡ ರಾಜೇಶ್ ಪೂಜಾರಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾಥೂರಾಮ್ ಗೋಡ್ಸೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆತನನ್ನು ಮಹಾನ್ ದೇಶಭಕ್ತ ಎಂದು ಬಿಂಬಿಸಲಾಗಿದೆ ಎಂದು ಹಲವರು ಈ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಕಾರ್ಯಕ್ರಮದಲ್ಲಿ ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯ ಅಧ್ಯಕ್ಷ ಎಲ್ ಕೆ ಸುವರ್ಣ, ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಮೊದಲಾದವರು ಭಾಗಿಯಾಗಿದ್ದರು. ಮಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಾರ್ಯಕ್ರಮ ಆಯೋಜಿಸಿದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಗ್ರಹ ವ್ಯಕ್ತವಾಗಿತ್ತು.
ಈ ಬೆಳವಣಿಗೆಗಳ ನಡುವೆ, ಗೋಡ್ಸೆ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ರಾಜೇಶ್ ಪೂಜಾರಿ, ವಿಶ್ವನಾಥ್ ಪೂಜಾರಿ , ಲೋಹಿತ್ , ಧನು ಸೇರಿದಂತೆ ಒಟ್ಟು ಐದು ಜನರ ವಿರುದ್ಧ ಸುಮೊಟೊ ಪ್ರಕರಣ ದಾಖಲು ಮಾಡಲಾಗಿತ್ತು.