ಮಂಗಳೂರು, ಮೇ22(Daijiworld News/SS): ಕರಾವಳಿಯಲ್ಲಿ ರಣ ಬಿಸಿಲಿನಿಂದ ಜನ ಕಂಗೆಟ್ಟಿದ್ದು, ಮಳೆಗಾಗಿ ಕಾಯುತ್ತಿದ್ದಾರೆ. ಒಂದೆಡೆ ಸುಡು ಬಿಸಿಲು, ಮತ್ತೊಂದೆಡೆ ನೀರಿನ ಸಮಸ್ಯೆ ತೀವ್ರಗೊಂಡಿದ್ದು ಜನ ವರುಣ ದೇವನ ಮೊರೆ ಹೋಗಿದ್ದಾರೆ. ಆದರೆ ಮಳೆರಾಯ ಮಾತ್ರ ಕರಾವಳಿಯಲ್ಲಿ ಕಣ್ಣಾ ಮುಚ್ಚಾಲೆಯಾಟವಾಡುತ್ತಿದ್ದಾನೆ.
ಕರಾವಳಿಯಲ್ಲಿ ಈಗಾಗಲೇ ಒಂದೆರಡು ದಿನ ಮಳೆ ಬಿದ್ದಿದ್ದು ಬಿಟ್ಟರೆ ಈ ಬಾರಿ ಬೇಸಿಗೆಯೇ ಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಎಲ್ಲೆಡೆ ನೀರಿಗೆ ಕೊರತೆಯಾಗಿದ್ದು, ಒಮ್ಮೆ ಮಳೆ ಬರಲಿ, ಧರಿತ್ರಿ ತಂಪಾಗಲಿ ಎಂದು ಜನ ಕಾಯುತ್ತಿದ್ದಾರೆ.
ಬೇಸಿಗೆ ಕಾಲ ಮುಗಿಯುತ್ತಾ ಬಂದಿದ್ದರೂ ಇನ್ನೂ ಕೂಡಾ ಬೇಸಿಗೆ ಮಳೆಯ ತಂಪು ಭೂಮಿಯನ್ನು ತೃಪ್ತಿಗೊಳಿಸಿಲ್ಲ. ಪರಿಣಾಮ ಕಳೆದೆರಡು ವಾರಗಳಿಂದ ಜಿಲ್ಲೆಯ ಒಳಭಾಗದಲ್ಲಿ ಬಿಸಿಲಿನ ಪ್ರಖರತೆ ತೀವ್ರಗೊಂಡಿದ್ದು, ಜನ ಹಗಲು ಮಾತ್ರವಲ್ಲದೆ, ರಾತ್ರಿಯೂ ಬೆವರಿಳಿಸುತ್ತಿದ್ದಾರೆ.
ಕರಾವಳಿಯ ಇತಿಹಾಸ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳ ಸೇರಿದಂತೆ ಅನೇಕ ದೇವಾಲಯಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ಈಗಾಗಲೇ ಅನೇಕ ದೇವಾಲಯಗಳಲ್ಲಿ ಮಳೆಗಾಗಿ ಪೂಜೆ ಹೋಮ ಹವನಗಳು ನಡೆದಿದೆ. ಅದೆಷ್ಟರ ಮಟ್ಟಿಗೆ ನೀರಿನ ಸಮಸ್ಯೆ ಜನರನ್ನು ಕಾಡುತ್ತಿದೆಯೆಂದರೆ ಬಹುಷಃ ಈ ರೀತಿ ಸಮಸ್ಯೆ ಕರಾವಳಿಯಲ್ಲಿ ಹಿಂದೆಂದೂ ಬಂದಿರಲಿಕ್ಕಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಈ ಹಿಂದೆ ಸಾಮಾನ್ಯವಾಗಿ ಪ್ರತೀ ವರ್ಷ ಮಾರ್ಚ್, ಏಪ್ರಿಲ್ ಆಸುಪಾಸಿನಲ್ಲಿ ಮಳೆಯಾಗುತ್ತಿತ್ತು. ಅದರಲ್ಲೂ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳದಲ್ಲಿ ತಕ್ಕಮಟ್ಟಿನ ಮಳೆಯಾಗುವುದು ವಾಡಿಕೆ. ಈ ಬಾರಿ ಮೇ ತಿಂಗಳು ಮುಗಿಯುತ್ತಾ ಬಂದರೂ ಭೂಮಿಗೆ ಇನ್ನೂ ಕೂಡ ಮಳೆಯೂ ಸರಿಯಾಗಿ ಬಿದ್ದಿಲ್ಲ. ಕಳೆದ ಹತ್ತು ದಿನಗಳ ಅವಧಿಯಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಹನಿ ಹನಿ ಮಳೆ ಬಿದ್ದಿದ್ದು ಬಿಟ್ಟರೆ ಉಳಿದಂತೆ ಬರೀ ಮೋಡ, ಮಳೆಯ ಆಮಿಷ, ಗಾಳಿ ಮಾತ್ರ ದಾಖಲಾಗಿದೆ.