ಉಡುಪಿ, ಮೇ22(Daijiworld News/SS): ಕರಾವಳಿಯ ಇತಿಹಾಸ ಪ್ರಸಿದ್ಧ ದೇವಾಲಯ ಧರ್ಮಸ್ಥಳ ಸೇರಿದಂತೆ ಉಡುಪಿ - ಮಂಗಳೂರಿನ ಅನೇಕ ದೇವಸ್ಥಾನಗಳ ಪುಷ್ಕರಣಿಗಳು ನೀರಿಲ್ಲದೆ ಒಣಗುತ್ತಿದೆ.
ಕರಾವಳಿ ಜಿಲ್ಲೆಯಲ್ಲಿ ಹಿಂದೆಂದೂ ಇಲ್ಲದ ನೀರಿನ ಸಮಸ್ಯೆ ಈ ಬಾರಿ ಎದುರಾಗಿದೆ. ನದಿಗಳೆಲ್ಲಾ ಬತ್ತಿದ್ದು, ಕೆರೆ ಬಾವಿಯ ನೀರು ಆವಿಯಾಗಿದೆ. ದೇವಸ್ಥಾನಗಳ ಪುಷ್ಕರಣಿಗಳು ಕೂಡ ನೀರಿಲ್ಲದೆ ಒಣಗುತ್ತಿದೆ.
ಉಡುಪಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಕೆರೆಯೂ ಬತ್ತಿದೆ. ದೇವಳದ ಅಂಗಳ ನಿತ್ಯ ಸ್ವಚ್ಛತೆ ನಿಲ್ಲಿಸಲಾಗಿದ್ದು, ಅಗತ್ಯವಿದ್ದಾಗ ಮಾತ್ರ ಕೈಗೊಳ್ಳಲಾಗುತ್ತಿದೆ. ಅಭಿಷೇಕ, ಪೂಜೆ ಮಾಡುವ ಅರ್ಚಕರ ಸ್ನಾನಕ್ಕೆ ಪ್ರತ್ಯೇಕ ಬಾವಿ ಇದ್ದು, ಅದರಲ್ಲಿ ನೀರು ಇದೆ. ಉಳಿದೆರಡು ಬಾವಿಗಳಿಂದ ಅಡುಗೆ, ಇನ್ನಿತರೆ ಕಾರ್ಯಗಳಿಗೆ ಬಳಸಲಾಗುತ್ತಿದೆ. ದೇವಳದ ಮುಂಭಾಗ ಇರುವ ಕಾಲು ತೊಳೆಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ.
ಇದೀಗ ಈ ಪರಿಸ್ಥಿತಿಯನ್ನು ಉಪಯೋಗಿಸಲು ಹೊರಟಿರುವ ದೇವಸ್ಥಾನದ ಆಡಳಿತ ಮಂಡಳಿ, ಕೆರೆಯ ಕೆಸರೆತ್ತುವ ಕೆಲಸ ಮಾಡುತ್ತಿದೆ. ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಹೂಳೆತ್ತುವ ಕೆಲಸ ಬಿರುಸಿನಿಂದ ನಡೆಯುತ್ತಿದೆ. ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ ಉಡುಪಿಯ ಪುರಾತನ ದೇವಸ್ಥಾನವಾಗಿದ್ದು, ಕಳೆದ 30 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕೆಸರೆತ್ತಲಾಗಿದೆ.