ಮಂಗಳೂರು, ಮೇ22(Daijiworld News/SS): ಶ್ರೀ ಕ್ಷೇತ್ರ ಧರ್ಮಸ್ಥಳದಂತೆ ಹಲವು ದೇವಸ್ಥಾನಗಳಿಗೂ ನೀರಿನ ಬಿಸಿ ತಟ್ಟತೊಡಗಿದೆ. ಇನ್ನು 15 ದಿನ ಮಳೆಯಾಗದಿದ್ದರೆ ಹಲವು ಕಡೆಗಳಲ್ಲಿ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನೀರಿಲ್ಲದೆ ಮುಂಭಾಗದ ಕೆರೆ ಬತ್ತುವ ಸ್ಥಿತಿ ತಲುಪಿದೆ. ಕೆರೆಯಲ್ಲಿ ಸುಮಾರು 2 ಅಡಿ ಮಾತ್ರವೇ ನೀರಿದ್ದು, ಮೀನುಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಟ್ಯಾಂಕರ್ ನೀರನ್ನು ಆಗಾಗ ಹಾಕಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶ್ರೀ ಕ್ಷೇತ್ರದಲ್ಲಿ ಮಧ್ಯಾಹ್ನ ಊಟಕ್ಕೆ 500ರಿಂದ 1000 ಯಾತ್ರಿಕರು ಇರುತ್ತಾರೆ. ಬಾವಿಯ ನೀರನ್ನು ಅರ್ಚಕರು ಮಾತ್ರವೇ ಬಳಸುತ್ತಾರೆ. ನೀರಿನ ಸಮಸ್ಯೆಯಾಗಿರುವುದರಿಂದ 2-3 ದಿನಕ್ಕೊಮ್ಮೆ ಟ್ಯಾಂಕರ್ ನೀರನ್ನು ಬಳಸಿಕೊಳ್ಳಲಾಗುತ್ತಿದೆ.
ಮಂಗಳೂರು ನಗರದೊಳಗಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ಮತ್ತಿತರ ಪವಿತ್ರ ಕಾರ್ಯಗಳಿಗೆ ದೇವಸ್ಥಾನದ ಏಕೈಕ ಸಿಹಿನೀರಿನ ಬಾವಿಯ ನೀರು ಮಿತವಾಗಿ ಬಳಸಲಾಗುತ್ತಿದೆ. ಊಟ, ಶೌಚಗೃಹ ಸಹಿತ ಇತರ ಉದ್ದೇಶಕ್ಕೆ ಮಹಾನಗರ ಪಾಲಿಕೆ ನೀಡುವ ನೀರು ಹಾಗೂ ಹೆಚ್ಚುವರಿಯಾಗಿ ಟ್ಯಾಂಕರ್ ನೀರು ಬಳಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇನ್ನೊಂದೆಡೆ ದಕ್ಷಿಣ ಕನ್ನಡದ ಜೀವನದಿಯಾಗಿರುವ ನೇತ್ರಾವತಿ ತನ್ನ ಹರಿವನ್ನು ನಿಲ್ಲಿಸಿದ್ದಾಳೆ. ಒಡಲನ್ನು ಸ್ವಲ್ಪ ಸ್ವಲ್ಪವೇ ಬರಿದು ಮಾಡಿಕೊಂಡು ರಣ ಬಿಸಿಲಿಗೆ ಮೈ ಒಡ್ಡಿದ್ದಾಳೆ. ನೇತ್ರಾವತಿಯು ದಿನೇ ದಿನೆ ಬತ್ತುತ್ತಿದ್ದು, ಇದೀಗ ಜನರಲ್ಲಿ ಆತಂಕ ಮನೆ ಮಾಡಿದೆ.