ಬಂಟ್ವಾಳ, ಮೇ 22 (Daijiworld News/SM): ನೀರಿನ ಸಮಸ್ಯೆ ತಾರಕಕ್ಕೇರಿರುವಂತೆ ಇದೀಗ ಜನತೆ ಕಂಗೆಟ್ಟಿದ್ದಾರೆ. ಆದರೆ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಯಾರೂ ಕೂಡ ಗಾಬರಿಪಡುವ ಅಗತ್ಯವಿಲ್ಲ. ಶುದ್ಧ ನೀರು ವಿತರಣೆಯಾಗುತ್ತಿದ್ದು, ಪಲ್ಲಿಗುಡ್ಡ ಪ್ರದೇಶದಿಂದಲೂ ನೀರನ್ನು ಪಡೆಯುವ ಕುರಿತು ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ 10 ದಿನಗಳಿಗೆ ಆಗುವಷ್ಟು ನೀರಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭರವಸೆ ನೀಡಿದ್ದಾರೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೆ ನೀರೊದಗಿಸಲು ಇನ್ನು ಹತ್ತು ದಿವಸಕ್ಕಾಗುವಷ್ಟು ನೀರಿದೆ. ನೀರಿನ ಕೊರತೆ ಇಲ್ಲ, ಮಿತಬಳಕೆಯ ಕುರಿತು ಜಾಗೃತಿಯೂ ಇರಲಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.
ಬಂಟ್ವಾಳದ ನೇತ್ರಾವತಿ ತೀರದಲ್ಲಿ ನೀರಿನ ಲಭ್ಯತೆ ಕುರಿತು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಿತ್ಯ ಅಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡುತ್ತಿದ್ದೇವೆ. ಸಮಸ್ಯೆ ಬಾರದಂತೆ ನೀರನ್ನು ಒದಗಿಸಲು ಪ್ರಯತ್ನ ಮಾಡುತ್ತಿದ್ದೇವೆ. ಜನರು ನೀರಿನ ಮಹತ್ವ ತಿಳಿಯಬೇಕಾಗಿದೆ ಎಂದರು.
ನೀರಿನ ಹರಿವು ಎಲ್ಲೆಲ್ಲಿದೆಯೋ ಅದನ್ನು ಉಪಯೋಗಿಸಲು ಸೂಚನೆ ನೀಡಲಾಗಿದೆ. ಆದಷ್ಟು ನೀರನ್ನು ಮಿತವಾಗಿ ಬಳಸಲು ಅಭ್ಯಾಸ ಮಾಡಿಕೊಳ್ಳಬೇಕು. ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಾಕ್ ವೆಲ್ ನಿಂದ ಒಂದು ಕಿ.ಮೀ.ನಷ್ಟು ಜಾಗದಲ್ಲಿ ಈ ಜಲ ಮೂಲವಿದ್ದು, ಇಲ್ಲಿಂದ ಜಾಕ್ ವೆಲ್ ಇದ್ದ ಪ್ರದೇಶಕ್ಕೆ ನೀರು ಹರಿಯುವಂತೆ ಮಾಡಿ ಲಿಫ್ಟ್ ಮಾಡುವ ಪ್ರಕ್ರಿಯೆಗೆ ತತ್ ಕ್ಷಣದಿಂದ ಚಾಲನೆ ನೀಡಲಾಗಿದೆ. ಇದಾದರೆ ಬಂಟ್ವಾಳಕ್ಕೆ ನೀರಿನ ಕೊರತೆ ಆಗುವುದಿಲ್ಲ ಎಂಬ ನಂಬಿಕೆ ಅಧಿಕಾರಿಗಳಲ್ಲಿದೆ ಎಂದು ಅವರು ತಿಳಿಸಿದ್ದಾರೆ.