ಸುರತ್ಕಲ್ ನ 26: ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರದಲ್ಲಿ, ರೌಡಿ ತಂಡದಿಂದ ಕಿಡ್ನಾಪ್ ಗೊಳಗಾದ ಯುವಕ ಸಫ್ವಾನ್ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಇಬ್ಬರನ್ನು ಪೊಲೀಸರು ವಶಪಡಿಸಿ ವಿಚಾರಣೆ ಪ್ರಾರಂಭಿಸಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಅ.5ರಂದು ಚೊಕ್ಕಬೆಟ್ಟು ಕಾಟಿಪಳ್ಳ 8 ನೇ ಬ್ಲಾಕ್ ನಿವಾಸಿ ಸಫ್ವಾನ್ ನ್ನು ರೌಡಿಗಳ ತಂಡವೊಂದು ಹಾಡುಹಗಲೆ ನಡುಬೀದಿಯಲ್ಲಿ ಕಾರಿನಲ್ಲಿ ಅಪಹರಿಸಿದ್ದಾರೆ ಎಂದು ಸಫ್ವಾನ್ ತಂದೆ ಅಬ್ದುಲ್ ಹಮೀದ್ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಹಲವು ಸಂಘಟನೆಗಳು ಸಫ್ವಾನ್ ಪತ್ತೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು. ಆದರೆ ಅಪಹರಣವಾಗಿ ತಿಂಗಳುಗಳು ಕಳೆದರೂ ಆರೋಪಿಗಳ ಸುಳಿವು ಪತ್ತೆಯಾಗಿರಲಿಲ್ಲ.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಪೊಲೀಸರು ಅಪಹರಣಕಾರರೆನ್ನಲಾದ ಸಂಶುದ್ದೀನ್ ಮುಕ್ಕ, ಸಫ್ವಾನ್ ಹುಸೈನ್, ಫೈಜಲ್ ಯಾನೆ ಟೊಪ್ಪಿ ಫೈಜಲ್, ಶಾಹಿಲ್ ಮತ್ತು ಸುಫಿಯಾನ್ ಎಂಬವರ ಭಾವಚಿತ್ರಗಳನ್ನು ಹಾಗೂ ಅಪಹರಣಕಾರರು ಉಪಯೋಗಿಸಿದ ಕಾರಿನ ಚಿತ್ರ , ಸಂಖ್ಯೆ ಕೆಎ 20 ಎಂಎ 2844 ಬಿಡುಗಡೆಗೊಳಿಸಿದ್ದರು.
ಇದೀಗ ಘಟನೆಗೆ ಸಂಬಂದಿಸಿದಂತೆ ಫೈಜಲ್ ಹಾಗೂ ಸಾಹಿಲ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ ಹೇಳಲಾಗಿದ್ದು, ಆರೋಪಿಗಳ ಹೇಳಿಕೆ ಪ್ರಕಾರ ಅಪಹರಿಸಿದಂದೇ ಕೊಲೆ ಮಾಡಿ ಮೃತದೇಹವನ್ನು ಆಗುಂಬೆ ಘಾಟಿಯಲ್ಲಿ ಎಸೆಯಲಾಗಿದೆ ಎಂದು ಕೆಲವೊಂದು ಮೂಲಗಳು ತಿಳಿಸಿವೆ.