ಮಂಗಳೂರು, ಮೇ 23 (Daijiworld News/MSP): ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮೂರನೇ ಬಾರಿಗೆ ಅತ್ಯಧಿಕ ಮತಗಳಿಂದ ಚುನಾಯಿತರಾಗುವ ಮೂಲಕ ಪ್ರತಿಷ್ಠಿತ ಕರಾವಳಿ ಕ್ಷೇತ್ರದಿಂದ ಬಿಜೆಪಿ ನಿರಂತರ ಎಂಟನೇ ಬಾರಿಗೆ ಗೆಲುವು ಸಾಧಿಸಿ ತನ್ನ ಪ್ರಾಬಲ್ಯ ಮುಂದುವರಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿ ಇತಿಹಾಸ ಬರೆದಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ
ಕಾಂಗ್ರೆಸ್ ಕೂಡ ಸ್ವ ಪಕ್ಷದ ವಿರೋಧ ನಡುವೆಯೂ ಸಂಪ್ರದಾಯವನ್ನು ಬದಿಗೊತ್ತಿ ಯುವ ನಾಯಕ ಮಿಥುನ್ ರೈ ಮಣೆ ಹಾಕಿದ್ದರೂ, 29 ವರ್ಷಗಳಿಂದಲೂ ಕಾಂಗ್ರೆಸ್ ಗೆ ಸೋಲು ಕಟ್ಟಿಟ್ಟ ಬುತ್ತಿಯಂತಾಗಿದೆ.
ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ 4,99,030 ಮತಗಳನ್ನು ಪಡೆದಿದ್ದರೆ, ನಳಿನ್ 6,42,739 ಮತಗಳನ್ನು ಪಡೆದು, 1,43,709 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್ ಯುವ ನಾಯಕನಿಗೆ ಅವಕಾಶ ನೀಡಿದರು ಮತದಾರರ ಮನ ಸೆಳೆಯುವಲ್ಲಿ ಸೋತಿದ್ದಾರೆ. ನಳಿನ್ ಕುಮಾರ್ ಕಟೀಲ್ 4,15,165 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ 2,52,843 ಮತ ಪಡೆದಿದ್ದಾರೆ