ಮಂಗಳೂರು, ಮೇ 23 (Daijiworld News/MSP): ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮೂರನೇ ಬಾರಿಗೆ ಅತ್ಯಧಿಕ ಮತಗಳಿಂದ ಚುನಾಯಿತರಾಗುವ ಮೂಲಕ ಪ್ರತಿಷ್ಠಿತ ಕರಾವಳಿ ಕ್ಷೇತ್ರದಿಂದ ಬಿಜೆಪಿ ನಿರಂತರ ಎಂಟನೇ ಬಾರಿಗೆ ಗೆಲುವು ಸಾಧಿಸಿ ತನ್ನ ಪ್ರಾಬಲ್ಯ ಮುಂದುವರಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿ ಇತಿಹಾಸ ಬರೆದಿದ್ದಾರೆ. ಯಾಕೆಂದರೆ ಈವರೆಗೆ 2.73 ಲಕ್ಷಕ್ಕೂ ಅಧಿಕ ಅಂತರ ಕಾಯ್ದುಕೊಳ್ಳವಲ್ಲಿ ಯಶಸ್ವಿಯಾಗಿದ್ದಾರೆ. 2009 ರಲ್ಲಿ ಅವರ ಗೆಲುವಿನ ಅಂತರ 40420 ಇದ್ದರೆ 2014 ರ ಲೋಕಸಭೆ ಚುನಾವಣೆಯಲ್ಲಿ 143704 ಅಂತರ ಕಾಯ್ದುಕೊಂಡಿದ್ದರು. ಇನ್ನು ಈ ಬಾರಿ 273367 ಅಂತರ ಕಾಯ್ದುಕೊಂಡು ಭರ್ಜರಿ ಬಹುಮತ ಪಡೆದಿದ್ದಾರೆ
ಕಾಂಗ್ರೆಸ್ ಕೂಡ ಸ್ವ ಪಕ್ಷದ ವಿರೋಧ ನಡುವೆಯೂ ಸಂಪ್ರದಾಯವನ್ನು ಬದಿಗೊತ್ತಿ ಯುವ ನಾಯಕ ಮಿಥುನ್ ರೈ ಮಣೆ ಹಾಕಿದ್ದರೂ, 29 ವರ್ಷಗಳಿಂದಲೂ ಕಾಂಗ್ರೆಸ್ ಗೆ ಸೋಲು ಕಟ್ಟಿಟ್ಟ ಬುತ್ತಿಯಂತಾಗಿದೆ.
ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ( 273367 -ಅಂಚೆ ಮತ ಹೊರತುಪಡಿಸಿ ) ಮತಗಳ ಅಂತರದಿಂದ ಸೋಲಿಸಿದರು. ನಳಿನ್ ಒಟ್ಟು 7, 74,285 (1531 ಅಂಚೆ ಮತ ಸೇರಿ) ಓಟು ಪಡೆದುಕೊಂಡರೆ, ಮಿಥುನ್ ರೈ 4,99,664 ( 277 ಅಂಚೆ ಮತ) ಓಟು ಗಳಿಸಿದರು. ಸುರತ್ಕಲ್ ನ ಎನ್ ಐ ಟಿ ಕೆ ಯಲ್ಲಿ ಗುರುವಾರ ಬೆಳಗ್ಗೆ ಎಂಟು ಗಂಟೆಗೆ ಆರಂಭವಾದ ಮತ ಎಣಿಕೆಯಲ್ಲಿ ಆರಂಭದ ಅಂಚೆ ಮತದ ಎಣಿಕೆಯಲ್ಲಿ ಮಿಥುನ್ ರೈ ಮುನ್ನಡೆ ಪಡೆದರೂ ಕೂಡಾ ಇವಿಎಂ ಮತ ಎಣಿಕೆ ಪ್ರಾರಂಭವಾದ ಬಳಿಕ ಬಿಜೆಪಿ ಮುನ್ನಡೆ ಸಾಧಿಸುತ್ತಾ ಹೋಗಿ ಗೆಲುವು ಸಾಧಿಸಿತು. ಜಿಲ್ಲಾ ಚುನಾವಣೆ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು.
ಎಸ್ಡಿಪಿಐಯ ಮೊಹಮ್ಮದ್ ಇಲ್ಯಾಸ್ 46839 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡರು. ಬಹುಜನ ಪಾರ್ಟಿಯ ಎಸ್ ಸತೀಸ್ ಸಾಲ್ಯನ್ 4713 ಮತಗಳನ್ನು ಪಡೆದ ನಾಲ್ಕನೇ ಸ್ಥಾನ ಪಡೆದರು. 7380 ಮಂದಿ ನೋಟಾಗೆ ಮತ ಚಲಾಯಿಸಿದ್ದಾರೆ. ದೀಪಕ್ ರಾಜೇಶ್ ಕುವೆಲ್ಲೊ 748, ಮ್ಯಾಕ್ಸಿಂ ಪಿಂಟೊ 908,ಸುಪ್ರೀತ್ ಕುಮಾರ್ ಪೂಜಾರಿ 948, ವೆಂಕಟೇಶ್ ಬೆಂಡೆ 1702, ಮೊಹಮದ್ ಖಲೀದ್ 602 ಮತಗಳನ್ನು ಪಡೆದುಕೊಂಡಿದ್ದಾರೆ.