ನವದೆಹಲಿ, ಆ 16 (DaijiworldNews/MS): ಭಾರತೀಯ ಚುನಾವಣಾ ಆಯೋಗವು ಮೂರು ರಾಜ್ಯಗಳ ಮುಂಬರುವ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸುವ ಸಾಧ್ಯತೆಯಿದೆ. ಈ ಬಗ್ಗೆ ಶುಕ್ರವಾರ ಬೆಳಿಗ್ಗೆ ಭಾರತದ ಚುನಾವಣಾ ಆಯೋಗವು " ವಿಧಾನಸಭೆಗಳಿಗೆ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲು ಪತ್ರಿಕಾಗೋಷ್ಠಿಯನ್ನು ನಡೆಸುವುದಾಗಿ" ಪ್ರಕಟಣೆಯಲ್ಲಿ ತಿಳಿಸಿದೆ.
2024 ರಲ್ಲಿ ಮಹಾರಾಷ್ಟ್ರ , ಹರಿಯಾಣ ಮತ್ತು ಜಾರ್ಖಂಡ್ನ ವಿಧಾನಸಭೆಗಳಿಗೆ ಚುನಾವಣೆಗಳು ನಡೆಯಲಿದ್ದು , ಈ ರಾಜ್ಯಗಳ ಐದು ವರ್ಷಗಳ ಅವಧಿ ಮುಕ್ತಾಯಗೊಳ್ಳಲಿದೆ.ಪ್ರಸ್ತುತ ಹರಿಯಾಣದಲ್ಲಿ ಬಿಜೆಪಿ ಸ್ವತಂತ್ರವಾಗಿ ಆಡಳಿತ ನಡೆಸುತ್ತಿದೆ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಬಣದ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುತ್ತಿದೆ. ಜಾರ್ಖಂಡ್ನಲ್ಲಿ, ಅಧಿಕಾರವು ಸೋರೆನ್ ಕುಟುಂಬದ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್ ಮೈತ್ರಿಯ ಮೇಲೆ ನಿಂತಿದೆ.
ಜಮ್ಮು ಮತ್ತು ಕಾಶ್ಮೀರದಲ್ಲೂ ಕಳೆದು ಐದು ವರ್ಷಗಳಿಂದ ಚುನಾಯಿತ ಸದನವಿಲ್ಲ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಚುನಾವಣೆ ದಿನಾಂಕಗಳು ಘೋಷಣೆಯಾಗುವ ನಿರೀಕ್ಷೆ ಇದೆ.
ಈ ತಿಂಗಳ ಕೊನೆಯಲ್ಲಿ ಎಲ್ಲಾ ಮೂರು ರಾಜ್ಯಗಳ ವಿಧಾನಸಭಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಪ್ರಕಟಿಸುವ ನಿರೀಕ್ಷೆಯಿದೆ ಮಹಾರಾಷ್ಟ್ರಕ್ಕೆ 30-35, ಹರಿಯಾಣಕ್ಕೆ 20 ಮತ್ತು ಜಾರ್ಖಂಡ್ಗೆ 25 ಅಭ್ಯರ್ಥಿಗಳನ್ನು ಬಹಿರಂಗಪಡಿಸಲು ಪಕ್ಷವು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.