ಕೋಲ್ಕತ್ತಾ, ಆ.16(DaijiworldNews/AA): ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎದೆಯ ವಿಭಾಗದಲ್ಲಿ ತುರ್ತು ಚಿಕಿತ್ಸಾ ಕೊಠಡಿಯನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಕೋಲ್ಕತ್ತಾ ಪೊಲೀಸರು ಇದುವರೆಗೆ 19 ಮಂದಿಯನ್ನು ಬಂಧಿಸಿದ್ದಾರೆ ಎಂದು ಇಂದು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿಯನ್ನು ಕೆಲ ದುಷ್ಕರ್ಮಿಗಳು ಹಾನಿಗೊಳಿಸಿದ್ದರು.
ಕಳೆದ ಶುಕ್ರವಾರ ಬೆಳಗ್ಗೆ ಕೋಲ್ಕತ್ತಾದ ಸರ್ಕಾರಿ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಮರಣೋತ್ತರ ಪರೀಕ್ಷೆ ನಡೆಸಿದಾಗ ತರಬೇತಿ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಕೊಲೆ ಮಾಡಿರುವುದು ವರದಿಯಲ್ಲಿ ಬಹಿರಂಗವಾಯಿತು.
ಘಟನೆಯ ಬಳಿಕ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ವ್ಯಾಪಕ ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲೇ ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಇನ್ನು ಪ್ರತಿಭಟನಾನಿರತ ವೈದ್ಯರೊಬ್ಬರು ಮಾತನಾಡಿ "ಗೂಂಡಾಗಳು ಕ್ಯಾಂಪಸ್ಗೆ ನುಗ್ಗಿ ಧರಣಿ ನಿರತ ವೈದ್ಯರಿಗೆ ಥಳಿಸಿದ್ದಾರೆ. ಇದು ನಮ್ಮ ನೈತಿಕ ಸ್ಥೈರ್ಯವನ್ನು ಮುರಿಯುವ ಪ್ರಯತ್ನವಾಗಿದೆ, ಇದರಿಂದಾಗಿ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುತ್ತೇವೆ. ಆದರೆ ಇಂತಹ ಘಟನೆಗಳು ಕೊನೆಯವರೆಗೂ ಹೋರಾಟದ ನಮ್ಮ ಸಂಕಲ್ಪವನ್ನು ಬಲಪಡಿಸಿದೆ" ಎಂದು ತಿಳಿಸಿದ್ದಾರೆ.