ಬೆಂಗಳೂರು,ಆ. 16, (DaijiworldNews/AK) : ರೇಣುಕಾಸ್ವಾಮಿ ಕೊಲೆ ಪ್ರಕರಣ ಅಂತಿಮ ಹಂತಕ್ಕೆ ತಲುಪಿದೆಯೆಂದು ಬೆಂಗಳೂರು ಪೊಲೀಸ್ ಆಯುಕ್ತರು ಬಿ ದಯಾನಂದ ಹೇಳಿದರು.
ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದ ಮೌಖಿಕ, ಸಾಂಧರ್ಭಿಕ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಮತ್ತು ಅಲ್ಲಿಂದ ಸುಮಾರು ಶೇಕಡ 70 ರಷ್ಟು ವರದಿಗಳು ತಮ್ಮ ಕೈ ಸೇರಿವೆ ಎಂದು ಹೇಳಿದರು.
ಗ್ಯಾಜೆಟ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳ ಸಾಕ್ಷ್ಯಗಳನ್ನು ಹೈದರಾಬಾದ್ ಎಫ್ಎಸ್ಎಲ್ ಗೆ ಕಳಿಸಲಾಗಿದ್ದು ಅಲ್ಲಿಂದ ವರದಿಗಳು ಕೆಲ ದಿನಗಳಲ್ಲಿ ತಮ್ಮನ್ನು ತಲುಪಲಿವೆ. ಎಲ್ಲ ವರದಿಗಳು ಪ್ರಾಪ್ತವಾದ ಬಳಿಕ ಮತ್ತೊಮ್ಮೆ ಸಾಕ್ಷಿಗಳಿಂದ ಸ್ಪಷ್ಟೀಕರಣ ಪಡೆಯಲಾಗುವುದು, ಅದಾದ ನಂತರ ಪ್ರಕರಣದ ಅಂತಿಮ ವರದಿ ಅಥವಾ ಚಾರ್ಜ್ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಆಯುಕ್ತರು ಹೇಳಿದರು.