ಬೆಂಗಳೂರು, ಆಗಸ್ಟ್ 17, (DaijiworldNews/TA) : ರಾಜ್ಯ ರಾಜಕಾರಣದಲ್ಲಿ ಸಿಎಂ ವಿರುದ್ಧದ ಮುಡಾ ಕೇಸ್ ಬಹಳಷ್ಟು ಸದ್ದು ಮಾಡಿತ್ತು. ಇದೀಗ ಮುಡಾ ಅಕ್ರಮ ಕೇಸ್ಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಿಂದ ಅನುಮತಿ ದೊರೆತಿದೆ.
ಅಬ್ರಾಹಂ ಎಂಬವರು ನೀಡಿದ್ದ ಖಾಸಗಿ ದೂರಿನ ಆಧಾರದಲ್ಲಿ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ವರದಿಯಾಗಿದೆ. ಅನುಮತಿ ದೊರೆತ ನಂತರ ಸಚಿವ ಜಿ. ಪರಮೇಶ್ವರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದ್ದಾರೆ.
ರಾಜ್ಯದಲ್ಲಿ ಮುಡಾ ಆದೇಶ ಹೊರಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ರಾಜಿನಾಮೆ ಮಾತುಗಳು ಕೇಳಿ ಬರುತ್ತಿದೆ. ವಿಪಕ್ಷ ನಾಯಕರು ರಾಜಿನಾಮೆಗೆ ಒತ್ತಾಯ ಹೇರುತ್ತಿದ್ದಾರೆ. ಈ ಬಗ್ಗೆ ಸಚಿವ ಪರಮೇಶ್ವರ್ ಸಿಎಂ ಪರ ಮಾತುಗಳನ್ನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವ ಆಗಲ್ಲ.
ನಾವು ಸಿಎಂ ಪರ ನಿಂತುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ದೆಹಲಿಯಿಂದ ಒತ್ತಡ ಬಂದಿರುವ ಕಾರಣ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿರಬಹುದು ಎಂದು ಹೇಳಿದ್ದಾರೆ. ನಾವು ಕಾನೂನಾತ್ಮಕವಾಗಿ ಎದುರಿಸ್ತೇವೆ ಎಂದು ಹೇಳಿದ್ದಾರೆ.