ಬೆಂಗಳೂರು, ಆ.17(DaijiworldNews/AA): ನಾನು ಯಾವ ಕಾರಣಕ್ಕೆ ರಾಜೀನಾಮೆಯನ್ನ ನೀಡಬೇಕು? ಯಾವ ಆಧಾರದ ಮೇಲೆ ನೀಡಬೇಕು? ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆಯನ್ನ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ತನಿಖೆ ನಡೆಸಲು ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿರುವ ಬಗ್ಗೆ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಮಾಡಲಾಯಿತು. ಈ ವೇಳೆ ರಾಜ್ಯಪಾಲರ ನಿರ್ಣಯವನ್ನ ಸಂಪುಟ ಸಭೆ ಖಂಡಿಸಿದೆ. ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ನಾವು ಬಡವರ ಪರ ಇದ್ದೇವೆಂದು ಟಾರ್ಗೆಟ್ ಮಾಡುತ್ತಿದ್ದಾರೆ. ರಾಜ್ಯಪಾಲರು ಈ ರೀತಿ ಮಾಡುತ್ತಾರೆಂದು ನಮಗೆ ಗೊತ್ತಿತ್ತು. ಇದರಿಂದ ನಾವು ಇನ್ನೂ ಗಟ್ಟಿಯಾಗುತ್ತಿದ್ದೇವೆ. ಇದರಿಂದ ಬಿಜೆಪಿ-ಜೆಡಿಎಸ್ನವರು ಬಯಲಿಗೆ ಬರುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯಪಾಲರ ನಿರ್ಧಾರಕ್ಕೆ ಕಾನೂನಿನ ಬಲವಿಲ್ಲ. ಸಂವಿಧಾನದ ಪ್ರತಿನಿಧಿಗಳಾಗಿ ಅವರು ಕೆಲಸ ಮಾಡಬೇಕೇ ಹೊರತು ಬಿಜೆಪಿ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ನನ್ನ ಮೇಲೆ ಯಾಕೆ ರಾಜ್ಯಪಾಲರನ್ನ ಬಳಸಿಕೊಳ್ಳುತ್ತಿದ್ದಾರೆ? ರಾಜ್ಯಪಾಲರ ನಿರ್ಧಾರ ವಿರುದ್ಧ ನಾವು ಕೂಡ ಕಾನೂನು ಹೋರಾಟ ಮಾಡುತ್ತೇವೆ. ರಾಜ್ಯಪಾಲರು ಕಾನೂನು ಬಾಹಿರವಾಗಿ ಅನುಮತಿಸಿದ್ದಾರೆ. ಅವರು ಅನುಮತಿ ನೀಡಿದ್ದು ಕೂಡ ನಿಯಮದಲ್ಲಿ ಇಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಾಗ ಕೇಂದ್ರ ಸರ್ಕಾರದ ಎಸ್ಓಪಿ ಪಾಲಿಸಿಲ್ಲ. ನಮ್ಮ ಸರ್ಕಾರ ಬಡವರ ಪರ ಇರುವಂತಹ ಸರ್ಕಾರ. ಬಿಜೆಪಿಯವರು ಗ್ಯಾರಂಟಿಗಳ ವಿರುದ್ಧವಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ, ಬಡವರ ಪರ ಕೆಲಸ ಮಾಡುತ್ತಿದ್ದೇವೆ. ನನ್ನ ರಾಜಕೀಯವಾಗಿ ತೇಜೋವಧೆ ಮಾಡಲು ಅವರ ಈ ಪ್ರಯತ್ನ ಯಶಸ್ವಿಯಾಗಲ್ಲ. ನನ್ನ ತೇಜೋವಧೆ ಮಾಡುವುದು ಬಿಜೆಪಿಯವರ ಭ್ರಮೆ. ನಮ್ಮ ಅಭೂತಪೂರ್ವ ಗೆಲುವು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.