ಕೊಪ್ಪಳ, ಆ.18 (DaijiworldNews/AK) : ತುಂಗಭದ್ರಾ ಜಲಾಶಯದಲ್ಲಿ ಮುರಿದಿದ್ದ 19ನೇ ಗೇಟ್ನಲ್ಲಿ ಎಲ್ಲಾ 5 ಸ್ಟಾಪ್ ಲಾಗ್ ಅಳವಡಿಕೆ ಯಶಸ್ವಿಯಾಗಿದೆ. ಇದೀಗ ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ.
ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ತಂಡ ಮೂರು ದಿನಗಳಿಂದ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು.ಅ.16 ರಂದು ಮೊದಲ ಎಲಿಮೆಂಟ್ ಅಳವಡಿಸಲಾಗಿತ್ತು. ಇದೀಗ ಶನಿವಾರ ಸಂಜೆ ಎಲ್ಲಾ ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ ಡ್ಯಾಂನಿಂದ ಹೊರ ಹೋಗುತ್ತಿದ್ದ ನೀರು ಸ್ಥಗಿತಗೊಂಡಿದೆ.
ಸದ್ಯ ಜಲಾಶಲಯದ ಎಲ್ಲ 33 ಗೇಟ್ಗಳನ್ನು ಮುಚ್ಚಲಾಗಿದೆ ಎಂದು ಟಿಬಿ ಡ್ಯಾಂ ಮಂಡಳಿ ತಿಳಿಸಿದೆ. ಈ ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ 70 ಟಿಎಂಸಿಯಷ್ಟು ನೀರು ಉಳಿಸಲು ಸಾಧ್ಯವಾಗಿದೆ. ಇನ್ನು ಆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇದುವರೆಗೆ ಪೋಲಾದ ನೀರು ಮತ್ತೆ ತುಂಬಿಕೊಳ್ಳುವ ವಿಶ್ವಾಸ ಮೂಡಿದೆ. ಸದ್ಯ ಜಲಾಶಯಕ್ಕೆ 41 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಮಾತನಾಡಿ, ರೈತರ ಬದುಕು ಹಸನುಗೊಳಿಸಲು ನಾನು ಈ ಇಳಿವಯಸ್ಸಿನಲ್ಲೂ ದೂರದ ಹೈದರಾಬಾದ್ನಿಂದ ಆಗಮಿಸಿ ಸ್ಟಾಪ್ ಲಾಗ್ ಗೇಟ್ ಅಳವಡಿಸಿರುವೆ. ಹರಿಯುವ ನೀರಿನಲ್ಲೇ ಗೇಟ್ ಅಳವಡಿಕೆ ಸವಾಲಿನ ಕೆಲಸ ಆಗಿತ್ತು. ಆದರೂ ನಮ್ಮ ಮನೆ ದೇವರಾದ ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಯಶಸ್ಸು ಸಾಧಿಸಿದ್ದೇವೆ. ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.