ನವದೆಹಲಿ, ಮೇ 24(Daijiworld News/SM): ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಕಾಂಗ್ರೆಸ್ ಮಿತ್ರಪಕ್ಷಗಳೆಲ್ಲಾ ಸೇರಿದರೂ ಸಹ 100 ಸ್ಥಾನವನ್ನೂ ಗೆಲ್ಲಲಾಗಿಲ್ಲ. ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಗೆದ್ದಿರುವುದು ಕೇವಲ 52 ಕ್ಷೇತ್ರಗಳಲ್ಲಿ ಮಾತ್ರ. ಹೀಗಿರುವ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಕನಿಷ್ಟ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಅರ್ಹತೆ ಕೂಡ ಇಲ್ಲ.
ವಿರೋಧ ಪಕ್ಷದಲ್ಲಿ ಮುಂದುವರೆಯ ಬೇಕಾದರೆ ಪಕ್ಷವೊಂದಕ್ಕೆ ಕನಿಷ್ಟ 10% ಮತಗಳು ಬೇಕು. ಅಂದರೆ ಸುಮಾರು 55 ಸ್ಥಾನಗಳಾನ್ನು ಕಾಂಗ್ರೆಸ್ ಗೆಲ್ಲಲೇ ಬೇಕಿತ್ತು. ಆದರೆ, ಇದೀಗ ಮೂರು ಸ್ಥಾನಗಳ ಕೊರತೆ ಕಾಂಗ್ರೆಸ್ ಪಕ್ಷಕ್ಕಿದೆ. ಈ ಕಾರಣದಿಂದಾಗಿ ಈ ಬಾರಿಯೂ ಕೂಡ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಿಂದ ವಂಚಿತವಾಗಲಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 44 ಕ್ಷೇತ್ರಗಳಲ್ಲಿ ಮಾತ್ರವೇ ಗೆಲುವು ದಾಖಲಿಸಿತ್ತು. ಆದರೆ, ಈ ಬಾರಿ 8 ಕ್ಷೇತ್ರಗಳನ್ನಷ್ಟೆ ಹೆಚ್ಚಿಸಿಕೊಂಡಿದೆ. ಇದರಿಂದಾಗಿ ಈ ಬಾರಿಯೂ ಸಹ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷ ಸ್ಥಾನ-ಮಾನ ಸಿಗುವ ಸಾಧ್ಯತೆ ಬಹಳ ಕಡಿಮೆ ಇದೆ.
ಆದರೆ ಆಡಳಿತ ಪಕ್ಷವು ಮನಸ್ಸು ಮಾಡಿದರೆ ಹೆಚ್ಚು ಸ್ಥಾನ ಪಡೆದಿರುವ ವಿರೋಧ ಪಕ್ಷಗಳ ಮುಖಂಡರಿಗೆ ಸಂಖ್ಯೆ ಕಡಿಮೆ ಇದ್ದರೂ ಸಹ ಅಧಿಕೃತ ವಿರೋಧ ಪಕ್ಷ ಸ್ಥಾನ ನೀಡಬಹುದು. ಆದರೆ, ಈ ಸ್ಥಾನ ಸಿಗುವ ಅವಕಾಶಗಳು ಮಾತ್ರ ಕಡಿಮೆ ಇವೆ.