ಬೆಂಗಳೂರು,ಆ.18 (DaijiworldNews/TA) : ಮುಡಾ ವಿಚಾರವಾಗಿ ಪ್ರಾಸಿಕ್ಯೂಷನ್ ಅಸ್ತ್ರ ಪ್ರಯೋಗಿಸಿದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ವಿಪಕ್ಷಗಳಂತೂ ಸಿಎಂ ರಾಜಿನಾಮೆಗಾಗಿ ಪಟ್ಟು ಹಿಡಿದಿದ್ದಾರೆ. ಇನ್ನು ಇದಕ್ಕೆಲ್ಲ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿ, ಇಬ್ಬರೂ, ರಾಜಿನಾಮೆ ಪ್ರಶ್ನೆಯೇ ಇಲ್ಲ ಎಂಬುವುದಾಗಿ ಹೇಳಿಕೆ ನೀಡಿದ್ದಾರೆ.
ಪ್ರಾಸಿಕ್ಯೂಷನ್ ಆದೇಶದ ವಿರುದ್ದ ಇಡೀ ಸಂಪುಟವೇ ತಿರುಗಿ ಬಿದ್ದಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರ ಆರೋಪ ಮಾಡಿದೆ. ಬಿಜೆಪಿ ಹೇಳಿದ್ದನ್ನೇ ಮಾಡುತ್ತಿದ್ದಾರೆ ಎಂದು ನೇರವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ ಕಾಂಗ್ರೆಸ್.
ಮತ್ತೊಂದೆಡೆ ಇಡೀ ಸಚಿವ ಸಂಪುಟ, ಹೈಕಮಾಂಡ್, ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದೆ. ಇವೆಲ್ಲಾ ಬದಲಾವಣೆಗಳ ನಡುವೆ ಸಿಎಂ ಸಿದ್ದರಾಮಯ್ಯ, ಬುಧವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಈ ಮೂಲಕ ಶಾಸಕರ ವಿಶ್ವಾಸ ಪಡೆಯಲು ಮುಂದಾಗಿದ್ದಾರೆ. ಪ್ರಸ್ತುತ ರಾಜಕಾರಣದಲ್ಲಿನ ಬದಲಾವಣೆ ಸಮಯದಲ್ಲೇ ಶಾಸಕಾಂಗ ಸಭೆ ಕರೆದಿರುವುದು ಮಹತ್ವ ಪಡೆದುಕೊಂಡಿದೆ.