ಬೆಂಗಳೂರು,ಆ.18 (DaijiworldNews/TA) : ನಾನು ರಾಜೀನಾಮೆ ಕೊಡಿ ಎಂದು ಕೇಳುವುದಿಲ್ಲ. ಕೊಡ್ತಾರೆ ಎನ್ನುವ ನಂಬಿಕೆ ಇಲ್ಲ. ದೇಶದಲ್ಲಿ ಕಾನೂನು ಇದೆ. ಕಾನೂನು ಪ್ರಕಾರ ಎಲ್ಲವೂ ಆಗುತ್ತದೆ. ಒಂದೂವರೆ ವರ್ಷದಿಂದ ಸರ್ಕಾರವನ್ನು ಹಾಳು ಮಾಡಿಕೊಂಡಿದ್ದೀರಿ. ಅಭಿವೃದ್ಧಿಯೂ ಆಗುತ್ತಿಲ್ಲ ಎಂದು ನಿಮ್ಮ ಶಾಸಕರೇ ಹೇಳುತ್ತಿದ್ದಾರೆ. ಒಬ್ಬರನ್ನು ಉಳಿಸೋಕೆ ರಾಜ್ಯವನ್ನು ಹಾಳು ಮಾಡಬೇಡಿ ಎಂದು ಕೇಂದ್ರ ಸಚಿವ ಹೆಚ್ಡಿಕೆ ಹೇಳಿದ್ದಾರೆ.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ಡಿ ಕುಮಾರಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದಾರೆ. ಮುಂದುವರೆದು ಮಾತನಾಡಿ ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ. ಬಂಡೆ ಅನ್ನೋದೇ ಡೇಂಜರ್. ವಯನಾಡ್, ಪಶ್ಚಿಮ ಘಟ್ಟ, ಕೊಡಗಿನಲ್ಲಿ ಭೂಕುಸಿತ ಆಗಿದೆ. ಭೂಕುಸಿತ ಆದ್ರೂ ಬಂಡೆಗಳು ರಕ್ಷಣೆ ಕೊಟ್ಟಿವೆಯೇ? ಭೂಕುಸಿತ ಆಗಿ ಹಲವಾರು ಜನ ಸಾಯೋಕೆ ಬಂಡೆಗಳೇ ಕಾರಣವಾಗಿದೆ. ಕರ್ನಾಟಕದಲ್ಲೂ ಈ ಬಂಡೆಗಳೇ ಕಾರಣ ಆಗುವ ಕಾಲ ದೂರವಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಸ್ಥಿತಿಗೆ ಡಿ.ಕೆ ಶಿವಕುಮಾರ್ ಕಾರಣ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ನನ್ನ ವಿರುದ್ಧ ಯಾಕೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಬೇಕು ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಿಸಿದ್ದು ಯಾರು? ಸಂಸತ್ನಲ್ಲಿ ಸಂವಿಧಾನ ಪುಸ್ತಕ ತೋರಿಸ್ತಾರೆ. ಈಗ ರಾಜ್ಯಪಾಲರ ಅಧಿಕಾರದ ವಿರುದ್ಧ ನೀವು ಏನ್ ಮಾಡ್ತಾ ಇದ್ದೀರಾ? ನನ್ನ ವಿರುದ್ಧ ಆರೋಪ ಬಂದಾಗ ನಾನು ಏಕಾಂಗಿಯಾಗಿ ಎದುರಿಸುತ್ತೇನೆ ಎಂದಿದ್ದೆ. ನಾನು ಕಾರ್ಯಕರ್ತರನ್ನು ಬಿಟ್ಟು ಪ್ರತಿಭಟನೆ ಮಾಡಿಸಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.