ಬೆಂಗಳೂರು, ಆ.18(DaijiworldNews/AA): ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲ ನಡೆಯ ವಿರುದ್ಧ ನಾಳೆ ರಾಜ್ಯ ವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ರಾಷ್ಟ್ರಪತಿಗಳಿಗೆ ಪ್ರತಿಭಟನೆಯನ್ನು ದಾಖಲಿಸಲಿದ್ದಾರೆ. ಪ್ರಕರಣ ಅಲ್ಲದಿದ್ದರೂ ಸಹ ಇದನ್ನು ಬೇಕಂತಲೇ ಎತ್ತಿ ಕಟ್ಟಲಾಗುತ್ತಿದೆ. ರಾಜ್ಯಪಾಲರ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಎಂದು ಮುಖಂಡರಿಗೆ ತಿಳಿಸಿದ್ದೇವೆ. ನಮ್ಮದು ಗಾಂಧಿ ಮಾರ್ಗದ ಶಾಂತಿಯುತ ಪ್ರತಿಭಟನೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರ ಭೇಟಿಯ ಕುರಿತು ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ಹಾಗೂ ಸಂದರ್ಭದ ಬಗ್ಗೆ ಅವರಿಗೆ ವಿವರಣೆ ನೀಡಿದ್ದೇವೆ ಎಂದು ತಿಳಿಸಿದರು.