ಬೆಂಗಳೂರು, ಆ.18 (DaijiworldNews/AK) : ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಂಡೆಯಿಂದಲೇ ಡೇಂಜರ್ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಹೇಳದೆ ಪರೋಕ್ಷವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊನ್ನೆ ಕೇರಳದಲ್ಲಿ ಮಳೆ ಬಂದು ಭೂಕುಸಿತ ಆಗಿದೆಯಲ್ಲಾ, ಆವಾಗ ಬಂಡೆಗಳಿಂದ ಡೇಂಜರ್ ಆಗಿದ್ದು ಎಂದು ತಿರುಗೇಟು ಕೊಟ್ಟಿದ್ದಾರೆ. ಜಂತಕಲ್ ಮೈನಿಂಗ್ ಪ್ರಕರಣದ ಬಗ್ಗೆ ಹೈಕೋರ್ಟ್ ಆದೇಶ ನೀಡಿದೆ. ಸಾಯಿ ವೆಂಕಟೇಶ್ವರ ಹಗರಣದ ಬಗ್ಗೆಯೂ ತನಿಖೆ ಮಾಡಿ ಅಂದರೂ. ಬೇಕಾದರೆ ಸುಪ್ರೀಂಕೋರ್ಟ್ಗೆ ಹೋಗಬಹುದು, ನನ್ನನ್ನು ಹೆದರಿಸಲು ಮಾತನಾಡುತ್ತಿದ್ದೀರಿ, ಯಾಕೆ ಈ ಡ್ರಾಮಾಗಳು ಎಂದು ವಾಗ್ದಾಳಿ ನಡೆಸಿದರು.
ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಕ್ಕೆ ಪ್ರತಿಭಟನೆ ನಡೆಸುತ್ತಿದ್ದೀರಿ. ನಿನ್ನೆಯಿಂದ ಸಂವಿಧಾನ ಬಿಕ್ಕಟ್ಟು ಅಂತಾ ಪ್ರತಿಭಟನೆ ಮಾಡಿದ್ದೀರಿ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಅಂತ ಪ್ರತಿಭಟನೆ ಮಾಡುತ್ತಿದ್ದೀರಿ. ಬಿಜೆಪಿನವರು ಸರ್ವನಾಶ ಮಾಡಲು ಹೊರಟಿದ್ದಾರೆಂದು ಹೇಳಿದ್ದಾರೆ. ಪಾರ್ಲಿಮೆಂಟ್ಗೆ ಸಂವಿಧಾನ ಪುಸ್ತಕ ಹಿಡಿದು ಬಂದರಲ್ಲಪ್ಪ. ಪ್ರಮಾಣ ವಚನ ಸ್ವೀಕರಿಸಲು ಇದೇನಾ ಸಂವಿಧಾನ ರಕ್ಷಣೆ ಎಂದು ಕಿಡಿಕಾರಿದ್ದಾರೆ.