ಕೋಲ್ಕತ್ತಾ, ಆ.20(DaijiworldNews/AA): ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವ ತನ್ನ ಅಳಿಯನನ್ನು ಗಲ್ಲಿಗೇರಿಸಿ, ಬೇಕಾದದ್ದನ್ನು ಮಾಡಿ ಎಂದು ಆತನ ಅತ್ತೆ ಕಿಡಿಕಾರಿದ್ದಾರೆ.
ಈ ಕುರಿತು ಆರೋಪಿ ಸಂಜಯ್ ರಾಯ್ನ ಅತ್ತೆ ದುರ್ಗಾ ದೇವಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಆರೋಪಿ ಸಂಜಯ್ ಒಬ್ಬನೇ ಕೃತ್ಯ ಎಸಗಿದಂತೆ ಕಾಣುತ್ತಿಲ್ಲ. ಈ ಕೃತ್ಯದಲ್ಲಿ ಅವನ ಜೊತೆ ಬೇರೆಯವರು ಇದ್ದಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಆರೋಪಿ ಸಂಜಯ್ ನನ್ನ ಮಗಳ ಜೊತೆ ಮದುವೆ ಬಳಿಕ ಆರಂಭದಲ್ಲಿ 6 ತಿಂಗಳು ಮಾತ್ರ ಆತ ಚೆನ್ನಾಗಿದ್ದ. ಬಳಿಕ ಆಕೆಗೆ ಥಳಿಸುತ್ತಿದ್ದ, ಹಿಂಸೆ ನೀಡುತ್ತಿದ್ದ. ಇದರಿಂದ ಆಕೆ 3 ತಿಂಗಳ ಗರ್ಭಿಣಿಯಾಗಿದ್ದಾಗ ಆಕೆಗೆ ಗರ್ಭಪಾತವಾಗಿತ್ತು. ಈ ಬಗ್ಗೆ ದೂರು ಕೂಡ ದಾಖಲಿಸಲಾಗಿತ್ತು ಎಂದು ಹೇಳಿದ್ದಾರೆ.
ಗರ್ಭಪಾತದ ಬಳಿಕ ನನ್ನ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಳು. ಅವಳ ಚಿಕಿತ್ಸೆಯ ಎಲ್ಲಾ ಖರ್ಚುನ್ನು ನಾನು ಭರಿಸಿದ್ದೇನೆ. ಸಂಜಯ್ ಒಳ್ಳೆಯವನಲ್ಲ. ಅವನನ್ನು ಗಲ್ಲಿಗೇರಿಸಿ, ಅವನಿಗೆ ನೀವು ಬೇಕಾದುದನ್ನು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.