ಮುಂಬೈ, ಆ. 20(DaijiworldNews/AK): ನರ್ಸರಿಯಲ್ಲಿ 4 ವರ್ಷದ ಇಬ್ಬರು ಬಾಲಕಿಯರ ಮೇಲೆ ಸ್ವಚ್ಛತಾ ಸಿಬ್ಬಂದಿ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಆಂಗ್ಲ ಮಾಧ್ಯಮ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ 23 ವಯಸ್ಸಿನ ಸ್ವಚ್ಛತಾ ಸಿಬ್ಬಂದಿ 4 ವರ್ಷದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಶೌಚಾಲಯದ ಒಳಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಘಟನೆ ಖಂಡಿಸಿ ಸಾರ್ವಜನಿಕರು ಹಾಗೂ ಪೋಷಕರು ಮುಂಬೈನ ಬಾದಲ್ಪುರ ಎಂಬಲ್ಲಿ ರೈಲು ಮಾರ್ಗದ ಬಳಿ ಪ್ರತಿಭಟನೆ ನಡೆಸಿದರು. ಮಕ್ಕಳ ಸುರಕ್ಷತೆ ಕಾಪಾಡುವಲ್ಲಿ ನರ್ಸರಿಯಲ್ಲಿ ವಿಫಲಗೊಂಡಿದೆ. ಮಕ್ಕಳಿಗೆ ನರ್ಸರಿಯಲ್ಲಿ ಸರಿಯಾದ ಭದ್ರತೆ ಇಲ್ಲದಿರುವುದಕ್ಕೆ ಈ ಘಟನೆ ಸಂಭವಿಸಿದೆ. ಇದಕ್ಕೆಲ್ಲಾ ಶಾಲೆ ಹೊಣೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಡಳಿತ ಮಂಡಳಿಯು, ಪ್ರಾಂಶುಪಾಲರನ್ನು ವಜಾಗೊಳಿಸಿದೆ. ಶಿಕ್ಷಕರು ಹಾಗೂ ದಾದಿಯರನ್ನು ಅಮಾನತು ಮಾಡಿದೆ. ಆದರೆ ವಿದ್ಯಾರ್ಥಿಗಳ ಪೋಷಕರು ಅಷ್ಟಕ್ಕೆ ಸುಮ್ಮನಾಗಿಲ್ಲ.
ನರ್ಸರಿಯಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಯಾವುದೇ ಮಹಿಳಾ ಸಿಬ್ಬಂದಿ ಇರಲಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಕೈಕೊಟ್ಟಿವೆ ಎಂದು ಪೊಲೀಸ್ ತನಿಖೆಯಲ್ಲಿ ವರದಿಯಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆದೇಶಿಸಿದ್ದಾರೆ.