ಮಹಾರಾಷ್ಟ್ರ, ಆ.21(DaijiworldNews/AA): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಆದರೆ ಈ ಪರೀಕ್ಷೆಯನ್ನು ಕೇವಲ 21ನೇ ವಯಸ್ಸಿಗೆ ಬರೆದು ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಅನ್ಸಾರ್ ಅಹ್ಮದ್ ಶೇಖ್ ಅವರ ಯಶೋಗಾಥೆ ಇದು.
ಅನ್ಸಾರ್ ಅವರು ಮೂಲತಃ ಮಹಾರಾಷ್ಟ್ರದ ಜಾಲ್ನಾದವರು. ಇವರ ತಂದೆ ಆಟೋ ರಿಕ್ಷಾ ಚಾಲಕರು. ಇವರದ್ದು ಬಡ ಕುಟುಂಬದ ಕಾರಣ ಅಂದು ದುಡಿದದ್ದು ಅಂದಿಗೆ ಸಾಕಾಗುತ್ತಿತ್ತು. ಅನ್ಸಾರ್ ಅವರಿಗೆ ಅನೀಶ್ ಎಂಬ ಸಹೋದರನಿದ್ದ. ಆತ ಅನ್ಸಾರ್ ಅವರಿಗೆ ಓದಿನಲ್ಲಿ ಸಹಾಯ ಮಾಡುವ ಉದ್ದೇಶದಿಂದ ಶಾಲಾ ಹಂತದಲ್ಲೇ ಓದನ್ನು ಅಂತ್ಯಗೊಳಿಸುತ್ತಾರೆ.
ಅನ್ಸಾರ್ ಅವರು ಪಿಯುಸಿ ಬಳಿಕ ಕಲಾ ವಿಭಾಗದಲ್ಲಿ ಪದವಿ ಗಳಿಸುತ್ತಾರೆ. ಪದವಿ ಓದುತ್ತಲೇ ಯುಪಿಎಸ್ ಸಿ ಪರೀಕ್ಷೆಗೂ ತಯಾರಿ ಪ್ರಾರಂಭಿಸುತ್ತಾರೆ. ಆದರೆ ಅನ್ಸಾರ್ ಅವರಿಗೆ ಯುಪಿಎಸ್ ಸಿ ಪರೀಕ್ಷೆಗೆ ತರಬೇತಿ ಪಡೆಯುವಷ್ಟು ಉತ್ತಮ ಸೌಲ್ಭ್ಯವಿರಲಿಲ್ಲ. ಆದರೆ ಅವರ ಸ್ನೇಹಿತರು ತರಬೇತಿ ಕೇಂದ್ರದ ಶುಲ್ಕವನ್ನು ಪಾವತಿಸಲು ಸಹಾಯ ಮಾಡುತ್ತಾರೆ.
ಅನ್ಸಾರ್ ಅವರು 2016 ರಲ್ಲಿ ತಮ್ಮ 21ನೇ ವಯಸ್ಸಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ತಮ್ಮ ಪರಿಶ್ರಮಕ್ಕೆ ತಕ್ಕ ಹಾಗೆ ಅವರು ಮೊದಲ ಪ್ರಯತ್ನದಲ್ಲೇ 362 ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುತ್ತಾರೆ. ಪ್ರಸ್ತುತ ಅನ್ಸಾರ್ ಅವರು ಪಶ್ಚಿಮ ಬಂಗಾಳದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.