ಬೆಂಗಳೂರು, ಆ.21(DaijiworldNews/AA): ಬಿಜೆಪಿಯಲ್ಲಿ ಆಂತರಿಕವಾಗಿ ಸಮಸ್ಯೆಯಿದೆ. ಅದನ್ನು ಸರಿ ಮಾಡಿಕೊಳ್ಳಲು ಈಗ ಮತ್ತೊಮ್ಮೆ ಪ್ರತಿಭಟನೆ ನಡೆಸುತ್ತಿದ್ದು ಅವರ ಪ್ರತಿಭಟನೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಅಕ್ರಮ ಎಂದು ಮೈಸೂರು ಚಲೋ ಮಾಡಿದರು. ಅದಕ್ಕೆ ಈಗಾಗಲೇ ನಾವು ಉತ್ತರ ಕೊಟ್ಟಿದ್ದೇವೆ. ಈಗ ಪ್ರತಿಭಟನೆ ಮಾಡುವವರನ್ನು ಬೇಡ ಎನ್ನಲು ಆಗುತ್ತದೆಯೇ? ಬೇಡ ಎಂದು ಹೇಳಿದವರು ಯಾರು? ಎಂದು ಕುಟುಕಿದರು.
ತುಂಗಭದ್ರಾ ಅಣೆಕಟ್ಟಿನ ಗೇಟ್ ಅನ್ನು ಕಾರ್ಮಿಕರ, ಇಂಜಿನಿಯರ್ ಗಳ, ಅಧಿಕಾರಿಗಳ ಶ್ರಮದಿಂದ ದುರಸ್ತಿ ಮಾಡಲಾಗಿದೆ. ಅಣೆಕಟ್ಟು ತುಂಬಿದ ತಕ್ಷಣ ನಾನು ಮತ್ತು ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವ ಕೆಲಸ ಮಾಡುತ್ತೇವೆ. ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡ ಪ್ರತಿಯೊಬ್ಬ ಕಾರ್ಮಿಕರನ್ನು ಗೌರವಿಸುವ ಕೆಲಸ ಸರ್ಕಾರ ಮಾಡಲಿದೆ. ಇಡೀ ದೇಶವೇ ಏನಾಗಬಹುದು ಎಂದು ಕಾತರದಿಂದ ನೋಡುತ್ತಿತ್ತು. ನಾವು ಇದರಲ್ಲಿ ಯಶಸ್ಸು ಕಂಡಿದ್ದೇವೆ. ವಿರೋಧ ಪಕ್ಷಗಳು ಈ ವಿಷಯದ ಬಗ್ಗೆ ಟೀಕೆ ಮಾಡುತ್ತಿದ್ದವು. ಆಗ ನಾವೇನು ಮಾತನಾಡಲಿಲ್ಲ ಎಮದು ತಿಳಿಸಿದರು.
ನಾವು ಕೆಲಸ ಮಾಡಿ ಸಾಧಿಸಿದ್ದೇವೆ. ಟೀಕೆಗಳು ಸಾಯುತ್ತವೆ. ಅದಕ್ಕೆ ಕೆಲಸಗಳು ಉಳಿಯುತ್ತವೆ. ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆಗೆ ಎಂದು ತಾಂತ್ರಿಕ ಸಮಿತಿ ರಚನೆ ಮಾಡಿದ್ದೇವೆ. ಅವರು ಎಲ್ಲಾ ಅಣೆಕಟ್ಟುಗಳ ಸುರಕ್ಷತ ವರದಿಯನ್ನು ನೀಡಲಿದ್ದಾರೆ ಎಂದರು.