ನವದೆಹಲಿ, ಆ.21(DaijiworldNews/AK): ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ವಿದೇಶ ಪ್ರವಾಸ ಕೈಗೊಂಡಿದ್ದು, ಮೊದಲು ಅವರು ಪೋಲೆಂಡ್ಗೆ ತೆರಳಲಿದ್ದಾರೆ.45 ವರ್ಷಗಳ ಬಳಿಕ ಪೋಲೆಂಡ್ಗೆ ಭಾರತದ ಪ್ರಧಾನಿಯೊಬ್ಬರ ಭೇಟಿಯಾಗಿದೆ.
ಪ್ರವಾಸದಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ಡೊನಾಲ್ಡ್ ಟಸ್ಕ್ ಮತ್ತು ಅಧ್ಯಕ್ಷ ಆಂಡ್ರೆಜ್ ದುಡಾ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ.
ಈ ಕುರಿತು ಪ್ರಧಾನಿ ಕಚೇರಿಯಿಂದ ಹೇಳಿಕೆ ಬಿಡುಗಡೆಯಾಗಿದ್ದು, ನಾವು ನಮ್ಮ ರಾಜತಾಂತ್ರಿಕ ಸಂಬಂಧಗಳಿಗೆ 70 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಪೋಲೆಂಡ್ಗೆ ಭೇಟಿ ನೀಡುತ್ತಿದ್ದೇನೆ. ಮಧ್ಯ ಯೂರೋಪಿನಲ್ಲಿ ಪೋಲೆಂಡ್ ಪ್ರಮುಖ ಆರ್ಥಿಕ ಪಾಲುದಾರ ಮತ್ತು ಅಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸುವುದಾಗಿ ಹೇಳಿದ್ದಾರೆ.
ಪೋಲೆಂಡ್ನಿಂದ ಪ್ರಧಾನಿ ಮೋದಿ ಆಗಸ್ಟ್ 23 ರಂದು ಐಷಾರಾಮಿ ‘ಟ್ರೇನ್ ಫೋರ್ಸ್ ಒನ್’ ನಲ್ಲಿ ಉಕ್ರೇನ್ಗೆ ಪ್ರಯಾಣಿಸಲಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ರಷ್ಯಾ ಉಕ್ರೇನ್ ಯುದ್ಧದ ಬಳಿಕ ಪ್ರಧಾನಿ ಮೋದಿ ಉಕ್ರೇನ್ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.