ಅಹಮದಾಬಾದ್ ,ಮೇ 25 (Daijiworld News/MSP): ಬೇಸಿಗೆಯ ಸುಡುಬಿಸಿಲಿಗೆ ಮನೆಯಿಂದ ಹೊರಗೆ ಹೋಗೋದು ಹೇಗೆ ಎನ್ನುವ ಚಿಂತೆ ಬಹಳ ಮಂದಿಯದ್ದು, ಕಾರಿದ್ದರೆ ಚಿಂತೆ ಇಲ್ಲ ಎಸಿ ಹಾಕಿ ತಣ್ಣಗೆ ಕಾರಿನ ಪ್ರಯಾಣದ ಸುಖ ಅನುಭವಿಸಬಹುದು. ಆದರೆ ಸುಖಕರ ಪ್ರಯಾಣದಲ್ಲಿ ಪ್ರಕೃತಿಯನ್ನು ಮಾತ್ರ ಮರೆತೇ ಬಿಡುತ್ತೇವೆ. ಇದಕ್ಕಾಗಿ ಅಹಮದಾಬಾದ್ನ ಮಹಿಳೆಯೊಬ್ಬರು ಉತ್ತಮ ವಿಶೇಷ ಉಪಾಯ ಕಂಡುಹುಡುಕಿದ್ದಾರೆ. ಅದೇ ಸೆಗಣಿ ಕಾರು.
ಅರೇ,! ಸೆಗಣಿ ಕಾರು ಎಂದು ಮೂಗುಮುರಿದುಕೊಳ್ಳಬೇಡಿ, ಯಾಕೆಂದರೆ ಈ ಸೆಗಣಿ ಕಾರು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಗೆದ್ದು ಸೆನ್ಸೇಷನಲ್ ಕ್ರಿಯೇಟ್ ಮಾಡುತ್ತಿದೆ.
ಅಹಮದಾಬಾದ್ ನಗರದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿದ್ದು ತಾಪಮಾನವು 45 ಡಿಗ್ರಿವರೆಗೂ ಏರಿಕೆಯಾಗಿದೆ. ಹೀಗಾಗಿ ಇಡೀ ಕಾರಿಗೆ ಸಗಣಿಯ ಲೇಪನ ಮಾಡಿ ಕಾರನ್ನು ತಂಪಾಗಿರಿಸುವ ಜತೆಗೆ ಚಾಲನೆ ವೇಳೆ ತಂಪಾದ ಅನುಭವವನ್ನು ಪಡೆಯುವ ಪ್ರಯತ್ನವನ್ನು ಅಹಮದಾಬಾದ್ ಸೆಜಲ್ ಶಾ ಮಾಡಿದ್ದಾರೆ.
ಹೊರಗಿನ ತಾಪಮಾನವು 45 ಡಿಗ್ರಿ ಇದ್ದರೆ, ಅವರ ಪ್ರಕಾರ ಸೆಗಣಿ ಹಚ್ಚಿದ ಬಳಿಕ ಅವರ ಕಾರಿನ ಒಳಗಿನ ತಾಪಮಾನ 36-37ಕ್ಕೆ ಇಳಿಕೆಯಾಗಿದೆಯಂತೆ. ಈ ಹೊದಿಕೆಯು ಕಾರನ ಒಳಗಿನ ತಾಪಮಾನ ಮಿತಿಯೊಳಗೆ ಇಡುತ್ತದೆ ಮತ್ತು ಬೇಸಿಗೆ ಕಾಲದಲ್ಲಿ ತಂಪಾಗಿರುತ್ತದೆ ಮತ್ತು ಚಳಿಗಾಲದಲ್ಲಿ ಬೆಚ್ಚಗಿರುತ್ತದೆ ಎಂದು ಸೆಜಲ್ ಶಾ ಹೇಳುತ್ತಾರೆ. ಜಾಗತಿಕ ತಾಪಮಾನ ಏರಿಕೆಯು ಒಂದು ಪ್ರಮುಖ ಕಾಳಜಿಯಾಗಿದ್ದಾಗ ಪರಿಸರವನ್ನು ಉಳಿಸುವ ಕಡೆಗೆ ತನ್ನ ಚಿಕ್ಕ ಪ್ರಯತ್ನದ ಪ್ರಯೋಗ ಎಂದು ಹೇಳುತ್ತಾರೆ.
ಸೆಜಲ್ ಶಾ ಎಂಬ ಮಹಿಳೆ ತಮ್ಮ ಟಯೋಟೋ ಕೊರೊಲ್ಲಾ ಆಲ್ಟಿಸ್ ಕಾರಿನ ಮೇಲ್ಮೈಗೆ ಸಗಣಿ ಸಾರಿಸಿದ್ದಾರೆ. ಮಾತ್ರವಲ್ಲದೆ ಅದಕ್ಕೆ ಕೆಂಪು ಮತ್ತು ಬಿಳಿ ರಂಗೋಲಿ ಮಾದರಿಯ ವಿನ್ಯಾಸಗಳೊಂದಿಗೆ ಬರೆದು ಮತ್ತಷ್ಟು ಆಕರ್ಷಕರಾಗುವಂತೆ ಮಾಡಿದ್ದಾರೆ.
ಇದನ್ನು ನೋಡಿದ ರೂಪೇಶ್ ಗೌರಂಗದಾಸ್ ಸಾಮಾಜಿಕ ಜಾಲತಾಣದಲ್ಲಿ ಕಾರಿನ ಚಿತ್ರವನ್ನು ಪೋಸ್ಟ್ ಮಾಡಿ , ಕಾರು ತಂಪಾಗಿಸಲು ಸಗಣಿಯ ಉತ್ತಮ ಬಳಕೆ ಎಂದಿದ್ದಾರೆ.
ಇವರ ಈ ಪ್ರಯೋಗಕ್ಕೆ ನೆಟ್ಟಿಗರು ಫಿದಾ ಆಗಿದ್ದು ಆಕೆಯ ಚಾಲಾಕಿತನವನ್ನು ಹೊಗಳಿ ಪ್ರಶಂಸೆಯ ಸುರಿಮಳೆಯನ್ನೇ ಹರಿಸಿದ್ದಾರೆ.