ಬೆಂಗಳೂರು, ಆ.22 (DaijiworldNews/AK) : ದಲಿತ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಅವಹೇಳನಕಾರಿ ಮಾತುಗಳನ್ನು ಆಡುತ್ತಿದ್ದಾರೆ ಎಂಬ ಬಿಜೆಪಿ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿಗೆ ತಿರುಗೇಟು ಕೊಟ್ಟಿರುವ ಸಿಎಂ ಬಿಜೆಪಿ ದಲಿತ ವಿರೋಧಿ ಅಂತ ಕಿಡಿಕಾರಿದ್ದಾರೆ.ರಾಜ್ಯದ ಘನತೆವೆತ್ತ ರಾಜ್ಯಪಾಲರಾಗಿರುವ ಥಾವರ್ ಚಂದ್ ಗೆಹ್ಲೋಟ್ ಅವರ ತಪ್ಪು ನಡೆಯ ಬಗೆಗಿನ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಾಗದ ರಾಜ್ಯದ ಬಿಜೆಪಿ ನಾಯಕರು “ದಲಿತ ಗುರಾಣಿ” ಬಳಸುತ್ತಿರುವುದು ಸಮಸ್ತ ಸ್ವಾಭಿಮಾನಿ ದಲಿತ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಹೇಳಿದ್ದಾರೆ.
ಹಿಂದೂಗಳಲ್ಲಿ ಜಾತಿಯೇ ಇಲ್ಲ, ಧರ್ಮವೇ ಎಲ್ಲ ಎಂದು ಉಪದೇಶ ಮಾಡುತ್ತಿರುವ ಬಿಜೆಪಿ ನಾಯಕರ ಬುಡಕ್ಕೆ ನೀರು ಬಂದಾಗ ಜಾತಿ ನೆನಪಾಗುತ್ತದೆ. ರಾಜ್ಯಪಾಲರಿಗೆ ಅವಮಾನವಾಗಿದೆ ಎಂದು ಪ್ರತಿಭಟಿಸುತ್ತಿರುವ ರಾಜ್ಯದ ಬಿಜೆಪಿ ನಾಯಕರಿಗೆ ನನ್ನ ಕೆಲವು ಸರಳ ಪ್ರಶ್ನೆಗಳಿವೆ.
ಮೊದಲನೆಯದಾಗಿ ದಲಿತ ಸಮುದಾಯಕ್ಕೆ ಸೇರಿರುವ ಥಾವರಚಂದ್ ಗೆಹ್ಲೋಟ್ ಅವರ ಬಗ್ಗೆ ನಿಮ್ಮಲ್ಲಿ ಅಷ್ಟೊಂದು ಗೌರವ ಮತ್ತು ಅಭಿಮಾನವಿದ್ದರೇ ಕೇಂದ್ರ ಸಚಿವ ಸಂಪುಟದಲ್ಲಿರಬೇಕಾಗಿದ್ದ ಅವರನ್ನು ಇಲ್ಲಿ ತಂದು ಪಂಜರದ ಗಿಣಿಯನ್ನಾಗಿ ಯಾಕೆ ಮಾಡಿದ್ದೀರಿ? ಮಾರ್ಗದರ್ಶಕ ಮಂಡಳಿ ಎಂಬ ವನವಾಸಾಶ್ರಮ ಸೇರುವಷ್ಟು ವಯಸ್ಸಾಗದೇ ಇದ್ದರೂ ಅವರ ಸಕ್ರಿಯ ರಾಜಕೀಯ ಜೀವನವನ್ನು ಯಾಕೆ ಮೊಟಕುಗೊಳಿಸಿದಿರಿ? ಕೇಂದ್ರ ಸಚಿವ ಸ್ಥಾನದಿಂದ ವಂಚಿತರನ್ನಾಗಿ ಮಾಡಿ, ತಮ್ಮ ರಾಜಕೀಯ ವಿರೋಧಿಗಳ ವಿರುದ್ಧದ ದ್ವೇಷದ ರಾಜಕಾರಣಕ್ಕೆ ದಲಿತ ಸಮುದಾಯದ ನಾಯಕನನ್ನು ದುರ್ಬಳಕೆ ಮಾಡಿಕೊಳ್ಳುವುದು ಆ ಸಮುದಾಯಕ್ಕೆ ಮಾಡುವ ಅನ್ಯಾಯ-ಅವಮಾನ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರೇ, ದಲಿತ ನಾಯಕರೊಬ್ಬರನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯೂ ಚುಚ್ಚಲಿಲ್ಲವೇ?ದಲಿತರನ್ನು ಬಳಸಿ ಬಿಸಾಡುವ ಬಿಜೆಪಿ ಮತ್ತು ಸಂಘ ಪರಿವಾರದ ಪಿತೂರಿ ರಾಜಕಾರಣವನ್ನು ಅರ್ಥಮಾಡಿಕೊಳ್ಳುವಷ್ಟು ದಲಿತ ಸಮುದಾಯ ಜಾಗೃತವಾಗಿದೆ.