ಬೆಂಗಳೂರು,ಆ.26(DaijiworldNews/AK): ಪ್ರಿಯಾಂಕ್ ಖರ್ಗೆಯವರ ಹಗರಣವೂ ಹೊರಗೆ ಬಂದಿದ್ದು, ಅವರನ್ನು ಸಚಿವ ಸ್ಥಾನಕ್ಕೆ ವಜಾ ಮಾಡಬೇಕೆಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ಬಿಜೆಪಿ ಕೋಲಾರ ಜಿಲ್ಲಾ ಕಚೇರಿಯಲ್ಲಿ ಇಂದು ಸದಸ್ಯತ್ವ ಅಭಿಯಾನ-2024ರ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಬುದ್ಧ ವಿಹಾರ ಕಟ್ಟಲು ಸಿದ್ಧಾರ್ಥ ವಿಹಾರ ಟ್ರಸ್ಟ್ ಮಾಡಲಾಗಿತ್ತು. ಆ ಟ್ರಸ್ಟ್ ಯಾವುದೇ ವ್ಯವಹಾರ ಮಾಡುವಂಥದ್ದಲ್ಲ. ಅಥವಾ ಕೈಗಾರಿಕೆ ಮಾಡುವಂಥದ್ದಲ್ಲ. ಅದೊಂದು ಧಾರ್ಮಿಕ ಸಂಸ್ಥೆ ಎಂದು ವಿವರಿಸಿದರು.
ಈ ಟ್ರಸ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಖರ್ಗೆ, ರಾಧಾಕೃಷ್ಣ, ಪ್ರಿಯಾಂಕ್ ಖರ್ಗೆ ಅವರೂ ಸೇರಿ ಅವರ ಮನೆಯವರೇ 7 ಜನ ಟ್ರಸ್ಟಿಗಳಾಗಿದ್ದಾರೆ. ಈ ಟ್ರಸ್ಟಿಗೆ ಒಂದು ಎಕರೆಗೆ 5 ಕೋಟಿ ಬೆಲೆಬಾಳುವ ಕೆಐಎಡಿಬಿಯ ಇಂಡಸ್ಟ್ರಿಯಲ್ ಲೇ ಔಟ್ನಲ್ಲಿ 5 ಎಕರೆ ಜಾಗವನ್ನು ಪಡೆದುಕೊಂಡಿದ್ದಾರೆ. ಈ ಜಾಗಕ್ಕೆ ಹೊರಗಡೆ ಪ್ರತಿ ಎಕರೆಗೆ 10ರಿಂದ 15 ಕೋಟಿ ಬೆಲೆ ನಡೆಯುತ್ತಿದೆ ಎಂದರು.
ಪ್ರಿಯಾಂಕ್ ಖರ್ಗೆ ಅವರೊಬ್ಬ ಸಚಿವರು. ಸಚಿವರಾದವರು ಯಾವುದೇ ಕಾರಣಕ್ಕೆ ಅಧಿಕಾರ ದುರುಪಯೋಗ ಮಾಡುವಂತಿಲ್ಲ; ರಾಧಾಕೃಷ್ಣ ಅವರು ಸಂಸದರು. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಸದಸ್ಯರು. ಇದು ಸ್ವಜನಪಕ್ಷಪಾತ ಮತ್ತು ಅಧಿಕಾರ ದುರುಪಯೋಗವೂ ಆಗುತ್ತದೆ. ಈ ಮಾಹಿತಿ ಎಲ್ಲ ಕಡೆ ಹರಿದಾಡುತ್ತಿದೆ. ಅವರು ಅದನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ತಕ್ಷಣ ಅವರನ್ನು ಕ್ಯಾಬಿನೆಟ್ನಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಆ ಜಮೀನನ್ನು ಮತ್ತೆ ವಾಪಸ್ ಪಡೆಯಬೇಕು. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂಬಂಧ ಮಾನ್ಯ ರಾಜ್ಯಪಾಲರಿಗೆ ನಾಳೆ ದೂರು ನೀಡಲಾಗುವುದು ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.