ನವದೆಹಲಿ, ಆ.26(DaijiworldNews/AK): ರೈತರ ಪ್ರತಿಭಟನೆ ಕುರಿತ ನಟಿ-ಸಂಸದೆ ಕಂಗನಾ ರಣಾವತ್ ಅವರಿಗೆ ಬಿಜೆಪಿ ಛೀಮಾರಿ ಹಾಕಿದೆ. ಅಲ್ಲದೇ ಕಂಗನಾ ಅವರ ಹೇಳಿಕೆ, ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯವಲ್ಲ ಎಂದು ಬಿಜೆಪಿ ಸ್ಪಷ್ಟೀಕರಣ ನೀಡಿದೆ.
ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ರೈತರ ಚಳುವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರೈತ ಹೋರಾಟ ನಿಗ್ರಹಿಸುವ ಸಂಬಂಧ ಕಠಿಣ ನಿಲುವುಗಳನ್ನು ಕೈಗೊಂಡಿತು. ನಾಯಕರು ಬಲವಾಗಿರದಿದ್ದರೆ ಅಥವಾ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮ್ಮ ದೇಶದಲ್ಲೂ ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದಕ್ಕೆ ಸ್ಪಷ್ಟೀಕರಣ ನೀಡಿರುವ ಬಿಜೆಪಿ, ಅದು ಪಕ್ಷದ ಅಭಿಪ್ರಾಯವಲ್ಲ, ಕಂಗನಾ ಅವರ ವೈಯಕ್ತಿಕ ಹೇಳಿಕೆ. ಪಕ್ಷದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅಧಿಕಾರ ಅವರಿಗಿಲ್ಲ ಹಾಗೂ ನಾವು ಯಾವುದೇ ರೀತಿಯ ಅನುಮತಿಯೂ ನೀಡಿಲ್ಲ ಎಂದಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಕಂಗನಾ ಅವರಿಗೆ ಎಚ್ಚರಿಕೆ ನೀಡಿದೆ.