ಬೆಂಗಳೂರು,ಆ.27(DaijiworldNews/AK): ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ನಿವೇಶನವನ್ನು ಅಕ್ರಮವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್ಗೆ ಹಂಚಿಕೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಇದು ವಾಣಿಜ್ಯ ಅಥವಾ ಕೈಗಾರಿಕಾ ಉದ್ದೇಶಕ್ಕೆ ಪಡೆದಿಲ್ಲ. ಇದು ಸಿಎ ಸೈಟು. ಎಂಬಿ ಪಾಟೀಲ್ ಅವರು ಇದರ ಬಗ್ಗೆ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. ಒಟ್ಟು 193 ಸಂಸ್ಥೆಗಳು ಅರ್ಜಿ ಹಾಕಿದ್ವು, 43 ಸಂಸ್ಥೆಗಳು ಮಾತ್ರ ಆಯ್ಕೆ ಆಗಿವೆ. ಇದರಲ್ಲಿ ಯಾವುದೇ ಪ್ರಭಾವ ಬೀರಿಲ್ಲ. ಬಿಜೆಪಿಯವರಿಗೆ ಕನಿಷ್ಟ ಜ್ಞಾನ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಿಎ ಸೈಟನ್ನು ಹರಾಜು ಹಾಕಲು ಅಗಲ್ಲ, ಅದನ್ನು ಖರಿದಿಯೇ ಮಾಡಬೇಕು. ಬಿಜೆಪಿಯವರು ಎಷ್ಟು ಜನ ಸಿಎ ನಿವೇಶನ ಪಡೆದಿಲ್ಲ ಕೇಳಿ. ಈ ಟ್ರಸ್ಟ್ ಮೂರು ದಶಕದಿಂದ ಚಾಲ್ತಿಯಲ್ಲಿದೆ, ಹಳೆಯ ಟ್ರಸ್ಟ್. ಶಿಕ್ಷಣ, ಸಮಾಜ ಸೇವೆ ಕೆಲಸ ಮಾಡಿಕೊಂಡು ಬರುತ್ತಿರುವ ಟ್ರಸ್ಟ್. ಯುವ ಸಮೂಹಕ್ಕೆ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯೋದು ತಪ್ಪಾ? ಇದಕ್ಕೆ ಜಮೀನು ಖಾಸಗಿಯವರು ಕೊಡಬೇಕು ಅಥವಾ ಸರ್ಕಾರದಿಂದ ಖರೀದಿ ಮಾಡಬೇಕು. ನಾವು ಸರ್ಕಾರದಿಂದ ಖರೀದಿ ಮಾಡಿದ್ದೇವೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಬಿಜೆಪಿಯವರು ಪ್ರೇರಣಾ ಟ್ರಸ್ಟ್ ಅಕ್ರಮದ ಬಗ್ಗೆ ಮಾತಾಡಲಿ, ರಾಷ್ಟ್ರೋತ್ಥಾನ ಸಂಸ್ಥೆಗೆ ಭೂಮಿ ಕೊಟ್ಟಿದ್ದಾರಲ್ಲ ಅದನ್ನು ಮಾತಾಡಲಿ. ಈ ವಿಚಾರದಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ. ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.