ನವದೆಹಲಿ, ಆ.29(DaijiworldNews/TA):ಅಬಕಾರಿ ನೀತಿ ಹಗರಣ ಪ್ರಕರಣಗಳಲ್ಲಿ ಬಿಆರ್ಎಸ್ ನಾಯಕಿ ಕವಿತಾ ಅವರಿಗೆ ಜಾಮೀನು ನೀಡಿರುವ ವಿಚಾರವಾಗಿ ಕಾನೂನು ಪ್ರಕ್ರಿಯೆಯ ವೇಗವನ್ನು ಪ್ರಶ್ನಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಗುರುವಾರ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ಪೀಠದ ನೇತೃತ್ವದ ನ್ಯಾಯಮೂರ್ತಿ ಬಿ ಆರ್ ಗವಾಯಿ, 'ಸಿಎಂ ಮಾಡಬೇಕಾದ ಹೇಳಿಕೆ ಇದೇನಾ? ಎಂದು ಪ್ರಶ್ನಿಸಿದ್ದಾರೆ. ಒಬ್ಬ ಸಾಂವಿಧಾನಿಕ ಅಧಿಕಾರಿ ಈ ರೀತಿ ಮಾತನಾಡಲು ಹೇಗೆ ಸಾಧ್ಯ ಎಂದು ಹೇಳಿದೆ.
'ಇಂತಹ ಹೇಳಿಕೆಗಳು ಜನರ ಮನಸ್ಸಿನಲ್ಲಿ ಆತಂಕವನ್ನು ಉಂಟುಮಾಡಬಹುದು.ರಾಜಕೀಯ ಪೈಪೋಟಿಯಲ್ಲಿ ಅವರು ನ್ಯಾಯಾಲಯವನ್ನು ಏಕೆ ಎಳೆಯಬೇಕು? ನಾವು ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ಮಾಡಿ ಆದೇಶಗಳನ್ನು ನೀಡುತ್ತೇವೆಯೇ?. ರಾಜಕಾರಣಿಗಳಿಂದ ಅಥವಾ ಯಾರಾದರೂ ನಮ್ಮ ಆದೇಶಗಳನ್ನು ಟೀಕಿಸಿದರೆ ನಮಗೆ ತೊಂದರೆಯಾಗುವುದಿಲ್ಲ. ನಾವು ಆತ್ಮಸಾಕ್ಷಿ ಮತ್ತು ಪ್ರಮಾಣ ವಚನದಂತೆ ನಮ್ಮ ಕರ್ತವ್ಯವನ್ನು ಮಾಡುತ್ತೇವೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.