ನವದೆಹಲಿ, ಆ.30(DaijiworldNews/AA): ಬಿಆರ್ಎಸ್ ನಾಯಕಿ ಕೆ.ಕವಿತಾ ಅವರಿಗೆ ಜಾಮೀನು ಮಂಜೂರಾದ ಕುರಿತು ತೆಲಂಗಾಣ ಸಿಎಂ ಎ.ರೇವಂತ ರೆಡ್ಡಿ ಅವರು ನೀಡಿದ್ದ ಹೇಳಿಕೆಗೆ ಸುಪ್ರೀಂ ಕೋರ್ಟ್ ಕಿಡಿ ಕಾರಿತ್ತು. ಇದರ ಬೆನ್ನಲ್ಲೇ ರೇವಂತ್ ರೆಡ್ಡಿ ಅವರು ಇಂದು ಸುಪ್ರೀಂ ಕೋರ್ಟ್ ಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕ್ಷಮೆ ಯಾಚಿಸಿರುವ ಅವರು, 'ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಅತ್ಯುನ್ನತ ಗೌರವ ಮತ್ತು ಸಂಪೂರ್ಣ ನಂಬಿಕೆ ಇದೆ. ಆಗಸ್ಟ್ 29ರಂದು ಪ್ರಕಟಗೊಂಡ ಕೆಲವು ಪತ್ರಿಕಾ ವರದಿಗಳು ನನಗೆ ಸಂಬಂಧಿಸಿದ ಕಾಮೆಂಟ್ಗಳನ್ನು ಒಳಗೊಂಡಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಜೊತೆಗೆ, ನಾನು ಗೌರವಾನ್ವಿತ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದೇನೆ ಎಂಬ ಭಾವನೆಯನ್ನು ನೀಡಿದೆ. ನಾನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ದೃಢ ನಂಬಿಕೆಯುಳ್ಳವನು ಎಂದು ಪುನರುಚ್ಚರಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಇನ್ನು 'ನ್ಯಾಯಾಂಗ ಮತ್ತು ಅದರ ಸ್ವಾತಂತ್ರ್ಯಕ್ಕಾಗಿ ಭಾರತದ ಸಂವಿಧಾನ ಮತ್ತು ಅದರ ನೀತಿಗಳಲ್ಲಿ ದೃಢ ನಂಬಿಕೆಯುಳ್ಳವನಾಗಿ, ನಾನು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಮುಂದಿನ ದಿನಗಳಲ್ಲೂ ಇದನ್ನೇ ಮುಂದುವರಿಸುತ್ತೇನೆ' ಎಂದು ಪೋಸ್ಟ್ ಮಾಡಿದ್ದಾರೆ.
ಕೆ.ಕವಿತಾ ಅವರಿಗೆ ಜಾಮೀನು ಮಂಜೂರಾದ ಬೆನ್ನಲ್ಲೇ ಸಿಎಂ ಎ.ರೇವಂತ ರೆಡ್ಡಿ ಅವರು, ಜಾಮೀನು ಪಡೆಯಲು ಬಿಜೆಪಿ ಮತ್ತು ಬಿಆರ್ಎಸ್ ನಡುವಿನ ಸಂಧಾನ ಕಾರಣವಾಗಿರಬಹುದು ಎಂದು ಹೇಳಿಕೆ ನೀಡಿದ್ದರು. ರೇವಂತ ರೆಡ್ಡಿ ಅವರ ಈ ಹೇಳಿಕೆಗೆ ಸುಪ್ರೀಂ ಕಿಡಿ ಕಾರಿತ್ತು.