ಕೋಲಾರ, ಆ.30(DaijiworldNews/TA):ದೇಶದಲ್ಲಿ ಮುಂದಿನ 15 ವರ್ಷ ರಾಹುಲ್ ಗಾಂಧಿಗೆ ಒಳ್ಳೆಯ ಕಾಲ ಬರಲಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರು.
ಬಿಜೆಪಿ ನೂರು ಸುಳ್ಳುಗಳನ್ನು ಹೇಳಿ ಒಂದು ಸತ್ಯ ಮಾಡಲು ಹೊರಟಿದೆ. ಈಗಾಗಲೇ ಮೋದಿಯವರ ವರ್ಚಸ್ಸು ಮುಗಿದಿದೆ. ಇನ್ನು ನಾಲ್ಕು ತಿಂಗಳಲ್ಲಿ ಕೇಂದ್ರ ಸರಕಾರವು ಪತನವಾಗಿ ಮೋದಿಯವರು ಅಧಿಕಾರ ಕಳೆದುಕೊಳ್ಳಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಬಿಜೆಪಿಗೆ ಬುದ್ಧಿ ಕಲಿಸಿದ್ದಾರೆ.
ಜನರು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಿಂದಲೂ ಜಾತಿ ಧರ್ಮ, ಭಾಷೆಯ ಭೇದವಿಲ್ಲದ ಪಕ್ಷವಾಗಿದೆ. ಎಲ್ಲಾ ವರ್ಗಗಳ ವಿಶ್ವಾಸದಿಂದ ಬಡವರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿದೆ. ಸುಮಾರು 70 ವರ್ಷಗಳ ಅಧಿಕಾರದ ಅವಧಿಯಲ್ಲಿ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕಾಣಿಕೆ ಅಪಾರವಾಗಿದೆ.
ಬಿಜೆಪಿಯಂತೆ ನೇರವಾಗಿ ಅಧಿಕಾರಕ್ಕೆ ಬಂದಿಲ್ಲ. ಮುಂದೆ ಸಹ ಕಾಂಗ್ರೆಸ್ನೊಂದಿಗೆ ಜನರ ವಿಶ್ವಾಸ ಇದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸರಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ ಎಂದು ಹೇಳಿದರು.