ಮುಂಬೈ, ಸೆ.1 (DaijiworldNews/TA):ಛತ್ರಪತಿ ಶಿವಾಜಿ ಪ್ರತಿಮೆ ನೆಲಸಮಗೊಳಿಸಿದ ಹಿನ್ನೆಲೆ ಇಂಡಿಯಾ ಬಣ 'ಹಿಟ್ ವಿತ್ ಪಾದರಕ್ಷೆ' ಪ್ರತಿಭಟನೆ ನಡೆಸಿದೆ. ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಿದೆ.
ಸಿಂಧುದುರ್ಗದ ಮಾಲ್ವಾನ್ನಲ್ಲಿ ಛತ್ರಪತಿ ಶಿವಾಜಿ ಅವರ 35 ಅಡಿಯ ಪ್ರತಿಮೆಯನ್ನು ನೆಲಸಮಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾ ವಿಕಾಸ್ ಅಘಾಡಿಯ ಪ್ರಮುಖ ನಾಯಕರಾದ ಶರದ್ ಪವಾರ್, ಉದ್ಧವ್ ಠಾಕ್ರೆ ಮತ್ತು ನಾನಾ ಪಟೋಲೆ ಅವರು ಮುಂಬೈನಲ್ಲಿ ನಡೆದ ಬೃಹತ್ “ಜೋಡೆ ಮಾರೊ” ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಕೋಟೆ ಪ್ರದೇಶದ ಹುತಾತ್ಮ ಚೌಕ್ನಿಂದ ಗೇಟ್ವೇ ಆಫ್ ಇಂಡಿಯಾದವರೆಗೆ ಪ್ರತಿಭಟನಾ ಮೆರವಣಿಗೆಗೆ ಏಕನಾಥ್ ಶಿಂಧೆ ಸರ್ಕಾರದಿಂದ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ.
ಪ್ರತಿಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. 50 ವರ್ಷಗಳಿಂದ ಕಾಂಗ್ರೆಸ್ ಮತ್ತು ಎನ್ಸಿಪಿ ನಾಯಕರು ಶಿವಾಜಿ ಮಹಾರಾಜರನ್ನು ಅವಮಾನಿಸುತ್ತಿದ್ದಾರೆ, ಇಂದಿರಾ ಗಾಂಧಿ ಅವರು ಕೆಂಪುಕೋಟೆಯಿಂದ ಶಿವಾಜಿ ಮಹಾರಾಜರ ಬಗ್ಗೆ ಒಂದು ಮಾತನ್ನೂ ಆಡಿಲ್ಲ, ಕಾಂಗ್ರೆಸ್ ಕ್ಷಮೆಯಾಚಿಸುವುದೇ? ಪ್ರಧಾನಿ ಮೋದಿ ಕ್ಷಮೆಯಾಚಿಸಿದ್ದಾರೆ, ಆದರೆ ಮಹಾ ವಿಕಾಸ್ ಅಘಾಡಿ ನಾಯಕರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಏಕೆಂದರೆ ಚುನಾವಣೆ ಸಮೀಪಿಸುತ್ತಿದೆ ಈ ಕಾರಣದಿಂದ ಅವರ ಪ್ರತಿಭಟನೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಕೇಶವ ಉಪಾಧ್ಯೆ, ಶಿವಾಜಿ ಮೇಲಿನ ಪ್ರತಿಪಕ್ಷಗಳ ಪ್ರೀತಿ ಮೇಲ್ನೋಟಕ್ಕೆ ಮಾತ್ರ ಸೀಮಿತ ಎಂದು ಹೇಳಿದ್ದಾರೆ. "ಪ್ರಧಾನಿಯವರ ಕ್ಷಮೆ ಸಾಕಾಗುವುದಿಲ್ಲವೇ? ರಫೇಲ್ ಎಪಿಸೋಡ್ನಲ್ಲಿ ತಮ್ಮ ಕಾಮೆಂಟ್ಗಳಿಗೆ ರಾಹುಲ್ ಗಾಂಧಿ ಕೂಡ ಕ್ಷಮೆಯಾಚಿಸಿದ್ದಾರೆ. ಈ ಕ್ಷಮೆಗಾಗಿ ಅವರು (ಎಂವಿಎ) ಇದೇ ರೀತಿಯ ಪ್ರತಿಭಟನೆಯನ್ನು ನಡೆಸುತ್ತಾರೆಯೇ?" ಎಂದು ಶ್ರೀ ಉಪಾಧ್ಯೆ ಪ್ರಶ್ನಿಸಿದ್ದಾರೆ.