ಮೈಸೂರು, ಸೆ.1(DaijiworldNews/AA): ಸಿಎಂ ಸಿದ್ದರಾಮಯ್ಯ ಅವರು ಅನುಮತಿ ನೀಡಿದರೆ ನಾನು ಮುಖ್ಯಮಂತ್ರಿ ಆಗುತ್ತೀನಿ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್.ವಿ ದೇಶಪಾಂಡೆ ಅವರು ಪರೋಕ್ಷವಾಗಿ ಸಿಎಂ ಆಗುವ ತಮ್ಮ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟರೆ ನಾನು ಸಿಎಂ ಆಗುತ್ತೇನೆ. ನಾನು ಸಚಿವ ಆಗಿ ದಣಿದಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕು ಅಷ್ಟೇ. ಆದ್ರೆ ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಮುಂದುವರೆದು ನನಗೆ ಸಿಎಂ ಆಗುವ ಆಸೆ ಇದೆ. ನಿಮ್ಮಂಥ ಜನರಿಗೂ ಆಸೆ ಇರುತ್ತೆ. ಲೈಫ್ನಲ್ಲಿ ಗುರಿ ಮುಖ್ಯ. ನಾನು ಸಿದ್ದರಾಮಯ್ಯಗಿಂತ 2 ವರ್ಷ ವಯಸ್ಸಿನಲ್ಲಿ ದೊಡ್ಡವನು. ಹೈಕಮಾಂಡ್ ಅವಕಾಶ ನೀಡಿದರೂ ಸಿದ್ದರಾಮಯ್ಯ ಅವರು ಅನುಮತಿ ನೀಡಬೇಕು. ನಾನು ಸಿದ್ದರಾಮಯ್ಯಗೆ ಒಳ್ಳೆಯ ಸ್ನೇಹಿತ. 5 ವರ್ಷ ಸಿಎಂ ಆಗಿ ಅವರೇ ಇರ್ತಾರೆ. ಸದ್ಯಕ್ಕೆ ಬದಲಾವಣೆ ಚರ್ಚೆ ನಡೆದಿಲ್ಲ ಎಂದರು.
ಸದ್ಯ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿಲ್ಲ. ನನಗೆ ಗೊತ್ತಿಲ್ಲದೆ ಯಾವ ಚರ್ಚೆಯೂ ನಡೆಯಲು ಸಾಧ್ಯವಿಲ್ಲ. ಪರಮೇಶ್ವರ್ ಹಾಗೂ ಜಾರಕಿಹೊಳಿ ಮನೆಯಲ್ಲಿ ನಡೆದಿರುವುದು ಇಲಾಖೆಗೆ ಸಂಬಂಧಪಟ್ಟ ಸಭೆ ಅಷ್ಟೇ ಎಂದು ಹೇಳಿದರು.