ವಿಜಯಪುರ, ಸೆ.6,(DaijiworldNews/TA): ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಳಿ ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ನಾಲ್ವರು ಬಲಿಯಾಗಿರುವ ಘಟನೆ ನಡೆದಿದೆ.
ಗುರುವಾರ (ಸೆ.06) ತಡರಾತ್ರಿ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಮತ್ತು ರಸ್ತೆ ಬದಿ ನಿಂತಿದ್ದ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ವರ್ಷಂಪ್ರತಿಯಂತೆ ಕುಂಟೋಜಿ ಗ್ರಾಮದ ಬಸವೇಶ್ವರ ದೇವರ ಜಾತ್ರೆ ನಡೆದಿತ್ತು. ಹೀಗೆ ಜಾತ್ರೆಗೆ ಬಂದಿದ್ದ ಇಬ್ಬರು ಯುವಕರು ಪಲ್ಸರ್ 200 ಸಿಸಿ ಬೈಕ್ನಲ್ಲಿ ವ್ಹೀಲಿಂಗ್ ಮಾಡಿದ್ದಾರೆ. ಎರಡು ಬಾರಿ ವ್ಹಿಲೀಂಗ್ ಮಾಡಿ ನಂತರ ಮೂರನೇ ರೌಂಡ್ ವ್ಹೀಲಿಂಗ್ ಮಾಡುವ ವೇಳೆ ಈ ಅಪಘಾತ ಸಂಭವಿಸಿದೆ.
ಗೋಟಖಂಡಕಿ ಗ್ರಾಮದ ವಾಸಿ ನಿಂಗರಾಜ ಚೌಧರಿ (22) , ಹಿಂಬದಿ ಸವಾರ ಹಂಚಲಿ ಗ್ರಾಮದ ನಿವಾಸಿ ಅನೀಲ ಖೈನೂರ (23) , ರಸ್ತೆ ಬದಿ ನಿಂತಿದ್ದ ಉದಯಕುಮಾರ ಪ್ಯಾಟಿ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಯಪ್ಪ ಬಾಗೇವಾಡಿ, ಶಾಹೀದ್ ಹುನಗುಂದ, ಪ್ರಶಾಂತ ಕುರುಬಗೌಡರ, ಹನುಮಂತ ಕುರುಬಗೌಡರ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಯಪ್ಪ ಬಾಗೇವಾಡಿ (24) ಮೃತಟ್ಟಿದ್ದಾಗಿ ಮಾಹಿತಿ ಲಭ್ಯವಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಎಸ್ಪಿ ಹೇಳಿದ್ದಾರೆ.