ದೆಹಲಿ, ಸೆ.7(DaijiworldNews/AA): ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸರ್ಕಾರಿ ಸೇವೆಯ ಆಯ್ಕೆಯನ್ನು ರದ್ದುಗೊಳಿಸಿದ ಒಂದು ತಿಂಗಳ ನಂತರ ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ವಿವಾದಿತ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ಭಾರತೀಯ ಆಡಳಿತ ಸೇವೆಯಿಂದ ವಜಾಗೊಳಿಸಿದೆ.
ಪೂಜಾ ಖೇಡ್ಕರ್ ಅವರು ಇತರ ಹಿಂದುಳಿದ ವರ್ಗಗಳು ಮತ್ತು ಅಂಗವೈಕಲ್ಯ ಕೋಟಾ ಪ್ರಯೋಜನಗಳನ್ನು ವಂಚನೆ ಮತ್ತು ತಪ್ಪಾಗಿ ಪಡೆದ ಆರೋಪದಲ್ಲಿ ತಪ್ಪಿತಸ್ಥರೆಂದು ತಿಳಿದುಬಂದಿದೆ. ಆಕೆಯ ಉಮೇದುವಾರಿಕೆಯನ್ನು ರದ್ದುಗೊಳಿಸಿದ ಬಳಿಕ, ಯುಪಿಎಸ್ಸಿ ಆಕೆಯನ್ನು ಜೀವನ ಪರ್ಯಂತ ಪ್ರವೇಶ ಪರೀಕ್ಷೆ ತೆಗೆದುಕೊಳ್ಳದಂತೆ ನಿರ್ಬಂಧಿಸಲಾಗಿತ್ತು. ಹಲವು ಬಾರಿ ಪರೀಕ್ಷೆಗೆ ಹಾಜರಾಗಲು ಪೂಜಾ ಖೇಡ್ಕರ್ ತನ್ನ ಗುರುತನ್ನು ನಕಲಿ ಮಾಡಿದ್ದಕ್ಕಾಗಿ ಯುಪಿಎಸ್ಸಿ ಅವರನ್ನು ತಪ್ಪಿತಸ್ಥರೆಂದು ಕಂಡುಹಿಡಿದಿದೆ.
ವಿವಾದದ ಬಳಿಕ, ಯುಪಿಎಸ್ಸಿ 2009 ಮತ್ತು 2023 ರ ನಡುವೆ ಐಎಎಸ್ ಸ್ಕ್ರೀನಿಂಗ್ ಪ್ರಕ್ರಿಯೆಯಲ್ಲಿ ಉತ್ತೀರ್ಣರಾದ 15,000 ಕ್ಕೂ ಹೆಚ್ಚು ಅಭ್ಯರ್ಥಿಗಳ ಡೇಟಾವನ್ನು ಪರಿಶೀಲಿಸಿದೆ. ಈ ವಿವರವಾದ ಪ್ರಕ್ರಿಯೆ ಬಳಿಕ, ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಪ್ರಕರಣವನ್ನು ಹೊರತುಪಡಿಸಿ, ಸಿಎಸ್ಇ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಪ್ರಯತ್ನಗಳಿಗಿಂತ ಹೆಚ್ಚಿನ ಸಂಖ್ಯೆಯ ಪ್ರಯತ್ನಗಳನ್ನು ಪಡೆದಿರುವ ಯಾವುದೇ ಅಭ್ಯರ್ಥಿ ಕಂಡುಬಂದಿಲ್ಲ ಎಂದು ಉಲ್ಲೇಖಿಸಲಾಗಿದೆ.
ಪೂಜಾ ಖೇಡ್ಕರ್ ಅವರು ಸೇವೆಯಲ್ಲಿ ತನ್ನ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ವಂಚನೆ ಮತ್ತು ಇತರ ಹಿಂದುಳಿದ ವರ್ಗಗಳು ಮತ್ತು ಅಂಗವಿಕಲ ಕೋಟಾ ಪ್ರಯೋಜನಗಳನ್ನು ತಪ್ಪಾಗಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.