ಜಮ್ಮು, ಸೆ.8(DaijiworldNews/AA): ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸಲು ಕಾಂಗ್ರೆಸ್-ಎನ್ಸಿ ಮೈತ್ರಿಕೂಟ ಪ್ರಯತ್ನಿಸುತ್ತಿದೆ. ಬಿಜೆಪಿ ಇರುವವರೆಗೂ ಅದು ಸಾಧ್ಯವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರಾಕೇಶ್ ಸಿಂಗ್ ಠಾಕೂರ್ ಅವರ ಪರವಾಗಿ ರಾಂಬನ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, 370ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನ ರದ್ಧತಿ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹತ್ತರ ಬದಲಾವಣೆಯಾಗಿದೆ. ಕಾಶ್ಮೀರದ ಯುವಕರು ಈಗ ಪಿಸ್ತೂಲ್ ಮತ್ತು ರಿವಾಲ್ವರ್ಗಳ ಬದಲಿಗೆ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳನ್ನು ಒಯ್ಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಬಿಜೆಪಿಯನ್ನು ಬೆಂಬಲಿಸಬೇಕಿದೆ. ಇದರಿಂದ ಈ ಭಾಗದಲ್ಲಿ ಬೃಹತ್ ಅಭಿವೃದ್ಧಿ ಕೆಲಸ ಮಾಡಲು ಸಹಾಯವಾಗುತ್ತದೆ. ಇಲ್ಲಿನ ಬದಲಾವಣೆಯನ್ನು ಕಂಡು ಪಿಒಕೆ ಜನರು ಪಾಕಿಸ್ತಾನ ಬೇಡ ಭಾರತಕ್ಕೆ ಸೇರುತ್ತೇವೆ ಎಂದು ಹೇಳಬೇಕು. ಪಾಕಿಸ್ತಾನವು ಪಿಒಕೆ ಭಾಗದ ಜನರನ್ನು ಪರಕೀಯರಂತೆ ಪರಿಗಣಿಸುತ್ತದೆ. ಆದರೆ ಭಾರತದಲ್ಲಿನ ಜನರು ನಿಮ್ಮನ್ನು ಹಾಗೆ ನೋಡುವುದಿಲ್ಲ. ನಾವು ನಿಮ್ಮನ್ನು ನಮ್ಮವರೆಂದು ಪರಿಗಣಿಸುತ್ತೇವೆ. ಆದ್ದರಿಂದ ನೀವು ನಮ್ಮೊಂದಿಗೆ ಬಂದು ಸೇರಿಕೊಳ್ಳಿ ಎಂದು ಪಿಒಕೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.