ಬೆಂಗಳೂರು,ಸೆ.10(DaijiworldNews/AK): ರಾಜ್ಯದ ಕಾಂಗ್ರೆಸ್ ಸರಕಾರವು ರಾಷ್ಟ್ರೀಯ ಪಕ್ಷ ಬಿಜೆಪಿಯ ಕಚೇರಿಗೆ ಭದ್ರತೆ ಒದಗಿಸಿಕೊಡುವುದರಲ್ಲಿ ಹಿಂದೆ ಮುಂದೆ ನೋಡುತ್ತಿದೆ. ಇದು ಬೇಹುಗಾರಿಕೆಯ ಅತ್ಯಂತ ದೊಡ್ಡ ವೈಫಲ್ಯ ಎಂದು ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಕಚೇರಿಯನ್ನು ಭಯೋತ್ಪಾದಕರು ಗುರಿಯಾಗಿ ಇಟ್ಟುಕೊಂಡಿದ್ದರು. ಕಾರಣಾಂತರದಿಂದ ರಾಮೇಶ್ವರಂ ಕೆಫೆಗೆ ಹೋಗಿ ಬಾಂಬ್ ಸ್ಫೋಟ ನಡೆಸಿದ್ದು ಎನ್ಐಎ ತನಿಖೆ ವೇಳೆ ಗೊತ್ತಾಗಿದೆ ಎಂದು ವಿವರಿಸಿದರು.
ಇದೇ ವಿಚಾರವನ್ನು ಅದು ಕೋರ್ಟಿಗೆ ತಿಳಿಸಿದೆ ಎಂದು ತಿಳಿಸಿದರು. ಬೇಹುಗಾರಿಕೆ ವಿಫಲತೆಗೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೇ ಹೊಣೆಗಾರರು ಎಂದು ಟೀಕಿಸಿದರು.
ರಾಜ್ಯದ ಗೃಹ ಸಚಿವರು ಸಂಪೂರ್ಣ ಅಸಮರ್ಥರಾಗಿದ್ದಾರೆ. ಅವರು ರಾಜೀನಾಮೆ ಕೊಡಬೇಕು ಅಥವಾ ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡಬೇಕೆಂದು ಇದೇವೇಳೆ ಅವರು ಆಗ್ರಹಿಸಿದರು.