ಬೆಂಗಳೂರು, ಸೆ.10(DaijiworldNews/AA): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿರುವ ಕಾರಣ ಸಿಎಂ ಅವರು ನಿಶ್ಚಿತವಾಗಿ ರಾಜೀನಾಮೆ ಕೊಡಲಿದ್ದಾರೆ. ಅದರಲ್ಲಿ ಎಳ್ಳಷ್ಟೂ ಅನುಮಾನ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ದಿನ ಬೆಳಗಾದರೆ, ನಾನೂ ಮುಖ್ಯಮಂತ್ರಿ ಆಗ್ಬೇಕು. ನನಗೂ ಆಸೆ ಇದೆ. ನಾನೇನೂ ಸನ್ಯಾಸಿ ಅಲ್ಲ ಎಂದು ಅನೇಕ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಎಂ.ಬಿ ಪಾಟೀಲ್, ಬಸವರಾಜ ರಾಯರೆಡ್ಡಿ, ಆರ್.ವಿ.ದೇಶಪಾಂಡೆ ಮೊದಲಾದವರು ಹೇಳಿಕೆ ಕೊಟ್ಟಿದ್ದಾರೆ. ಮತ್ತೊಂದು ಕಡೆ ಇಂಥ ಹೇಳಿಕೆ ನಿಲ್ಲಿಸಲು ಸೂಚಿಸುವಂತೆ ಕಾಂಗ್ರೆಸ್ ಮುಖಂಡರೇ ಅವರ ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ಆಶೀರ್ವಾದದಿಂದಲೇ ಕಾಂಗ್ರೆಸ್ಸಿನ ಹಿರಿಯ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ಈಗಾಗಲೇ ಹಗ್ಗಜಗ್ಗಾಟ ಶುರುವಾಗಿದೆ. ಯಾವುದೇ ಸಂದರ್ಭದಲ್ಲಿ ಬೇಕಾದರೂ ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.